ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ಇತ್ತೀಚೆಗೆ ನಿಧನರಾಗಿದ್ದರು. ಈ ವೇಳೆ ಮಗ ಪ್ರಧಾನಿ ಆಗಿದ್ದರೂ ಕೂಡ ಮೋದಿ ಅವರು ತಾಯಿಯ ಅಂತ್ಯಸಂಸ್ಕಾರ ಯಾವುದೇ ಆಡಂಬರವಿಲ್ಲದೇ, ಗೌಜು ಗದ್ದಲಗಳಿಲ್ಲದೇ ಸರಳವಾಗಿ ನಡೆಸಿದರು.
ಪ್ರಧಾನಿ ಮೋದಿ ಅವರ ಈ ಕಾರ್ಯ ಮಾದರಿ ನಡೆ ಎಂದೇ ಬಹುತೇಕರು ಹೊಗಳಿದ್ದರು. ಇದೀಗ ಪ್ರಧಾನಿ ಮೋದಿ ಕುಟುಂಬದ ಸರಳತೆಯ ಮತ್ತೊಂದು ನಿದರ್ಶನ ಅನಾವರಣವಾಗಿದೆ.
ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಅವರಿಗೆ ಶ್ರದ್ದಾಂಜಲಿ ಸೂಚಿಸಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ. ಕೆಲವರು ಅವರ ಶ್ರದ್ಧಾಕರ್ಮಗಳ ವಿವರಗಳನ್ನು ಅದರಲ್ಲಿ ನೀಡುತ್ತಾರೆ. ಗಣ್ಯಾತಿಗಣ್ಯರು ಮೃತಪಟ್ಟಾಗ ಅವರ ಪತ್ರಿಕೆಯ ಮುಖಪುಟದಲ್ಲಿ ಒಂದು ಪೇಜ್ ಪೂರ್ತಿ ದೊಡ್ಡದಾದ ಜಾಹೀರಾತು ರಾರಾಜಿಸುತ್ತಿರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಮೃತಪಟ್ಟಾಗ ಪತ್ರಿಕೆಯ ಜಾಹೀರಾತು ವಿಭಾಗದ ಸಣ್ಣದೊಂದು ಮೂಲೆಯಲ್ಲಿ ಜಾಹೀರಾತು ನೀಡಲಾಗಿದೆ. ಅದೂ ಗುಜರಾತ್ ಭಾಷೆಯ ಸ್ಥಳೀಯ ಮಟ್ಟದ ಪತ್ರಿಕೆಯಲ್ಲಿ. ಈ ಮೂಲಕ ಅಲ್ಲೂ ಪ್ರಧಾನಿ ನರೇಂದ್ರ ಮೋದಿ ಕುಟುಂಬ ಸರಳತೆ ತೋರಿದೆ.
ಪ್ರಧಾನಿ ಮೋದಿ ಅವರು ಮನಸ್ಸು ಮಾಡಿದರೆ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲೇ ತಮ್ಮ ತಾಯಿಯ ನಿಧನದ ಜಾಹೀರಾತನ್ನು ನೀಡಬಹುದಿತ್ತು. ಆದರೆ ಹಾಗೆ ಮಾಡದೇ ಒಂದು ಸರಳ ಮಾರ್ಗದ ಬುನಾದಿ ಹಾಕಿ ಇತರರಿಗೂ ಮಾದರಿಯಾಗಿದ್ದಾರೆ.
ಡಿಸೆಂಬರ್ 30 ರಂದು ಮುಂಜಾನೆ 3.30ರ ಸುಮಾರಿಗೆ ಹೀರಾಬೆನ್ ನಿಧನರಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಹೀರಾಬೆನ್ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮ್ಮ ತಾಯಿ ನಿಧನದ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದರು.
ಮುಂಜಾನೆ 3.30ಕ್ಕೆ ನಿಧನರಾದ ತಾಯಿಯ ಅಂತ್ಯಸಂಸ್ಕಾರ ಬೆಳಗ್ಗೆ ಆರು ಗಂಟೆಗೆಲ್ಲಾ ಮುಕ್ತಾಯವಾಗಿತ್ತು. ಯಾವುದೇ ಗಣ್ಯಾತಿಗಣ್ಯರ ಅಂತಿಮ ದರ್ಶನಕ್ಕೆ ಅಲ್ಲಿ ಅವಕಾಶ ನೀಡಿರಲಿಲ್ಲ. ಶವಸಂಸ್ಕಾರಕ್ಕಾಗಿ ಯಾವುದೋ ಸಾರ್ವಜನಿಕ ಆಸ್ತಿಯಲ್ಲಿ ನೆಲಸಮದ ಕೆಲಸ ಮಾಡಲಿಲ್ಲ. ಪ್ರಧಾನಿ ತಾಯಿ ಎಂಬ ಕಾರ್ಣಕ್ಕೆ ಮೃತದೇಹಕ್ಕೆ ರಾಷ್ಟ್ರಧ್ವಜವನ್ನು ಹೊದಿಸಲಿಲ್ಲ. ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುವಂತೆ ಸ್ವತಃ ಪ್ರಧಾನಿ ತಾಯಿಯ ಅಂತಿಮಯಾತ್ರೆಗೆ ಹೆಗಲು ನೀಡಿದ್ದರು. ನಂತರ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು.
