ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೂತನ ಗೋಪುರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಒಂದೇ ಕಾಲಿನಲ್ಲಿ ಗಗ್ಗರವನ್ನು ಕಟ್ಟಿ ರಸ್ತೆಯುದ್ಧಕ್ಕೂ ಆವೇಶಭರಿತವಾಗಿ ಒಂಟಿಕಾಲಿನಲ್ಲೇ ನಡೆದುಕೊಂಡು ಬಂದು ಭಕ್ತರಿಗೆ ಇಂಬು ಕೊಡುವ ಕಾರಣಿಕದ ದೈವ ಬನ್ನಡ್ಕದ ದೈವ. ನಮ್ಮ ಜಿಲ್ಲೆಯಲ್ಲಿ ಬೇರೆ ಬೇರೆ ದೈವಗಳು ಆಯಾಯ ಕಾಲ ಕೂಡಿ ಬಂದಾಗ ಅವುಗಳ ಕಾರಣಿಕವನ್ನು ತೋರಿಸುತ್ತಾ ಬರುತ್ತಿವೆ. ಇದೀಗ ಬನ್ನಡ್ಕ ಕ್ಷೇತ್ರವೂ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ. ಪ್ರತಿಯೊಂದು ಮನೆಯಿಂದಲೂ ಪ್ರತಿ ತಿಂಗಳು ಒಂದು ಮುಷ್ಠಿಯಷ್ಟು ದಾನವನ್ನು ದೇವಸ್ಥಾನಕ್ಕೆ, ದೇವರಿಗೆ ಮೀಸಲಿಡುತ್ತೇವೆಂದು ಸಂಕಲ್ಪ ಮಾಡಿದರೆ ಗೋಪುರದ ನಿರ್ಮಾಣ ಯಶಸ್ವಿಯಾಗಿ ನೆರವೇರಿ ಬ್ರಹ್ಮಕಲಶವೂ ಆಗಬಹುದು ಆದ್ದರಿಂದ ಪ್ರತಿಯೊಬ್ಬರೂ ಸಂಕಲ್ಪವನ್ನು ಮಾಡುವ ಮೂಲಕ ಗೋಪುರದ ನಿರ್ಮಾಣಕ್ಕೆ ಸಹಕರಿಸಿ ಎಂದು ನುಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ದೈವ ದೇವರುಗಳು ನಮ್ಮ ನಂಬಿಕೆ. ಆ ನಂಬಿಕೆಗಳನ್ನು ಉಳಿಸಿಕೊಂಡು ಬದುಕುವವರು ಹಿಂದುಗಳು. ಇದೀಗ ಎಲ್ಲಾ ಕಡೆಗಳಲ್ಲೂ ದೈವಸ್ಥಾನ, ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿರುವ ಉತ್ತಮ ಲಕ್ಷಣ. 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ಆಗಬೇಕೆಂಬುದು ತುಳುನಾಡಿನ ಸಂಸ್ಕೃತಿ.ನೂತನ ಗೋಪುರದ ನಿರ್ಮಾಣಕ್ಕೆ ಕಾರಣಿಕದ ಶಕ್ತಿಗಳು ಎಲ್ಲರಿಗೂ ಶಕ್ತಿಯನ್ನು ತುಂಬಿ ಒಗ್ಗಟ್ಟಾಗಿ ಗೋಪುರ ನಿರ್ಮಾಣ ಮಾಡಲು ದಾರಿ ತೋರಿಸಲಿ ಎಂದ ಅವರು ಸರಕಾರದಿಂದ ಆಗುವ ಸಹಾಯಕ್ಕೆ ಪ್ರಯತ್ನಿಸುವೆ ಎಂದರು.
ಶ್ರೀ ಕ್ಷೇತ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಆರ್.ಬಲ್ಲಾಳ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮಗೆ ಅನುಗ್ರಹ, ನ್ಯಾಯ, ಹೆದರಿಕೆ ಎಲ್ಲವೂ ದೈವ ದೇವರುಗಳಿಂದ ಆಗುತ್ತದೆ ಎಂಬುದನ್ನು ಇತ್ತೀಚಿನ ಸಿನೆಮಾ ಕಾಂತಾರ ತೋರಿಸಿಕೊಟ್ಟಿದೆ. ಇಲ್ಲಿನ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತನು ಮನ ಧನ ಸಹಕಾರದ ಅಗತ್ಯವಿದೆ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸಮಿತಿಯ ಗೌರವಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಹರೀಶ್, ಅನುವಂಶಿಕ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಕೋಶಾಧಿಕಾರಿ ರಘುಚಂದ್ರ ಬಲ್ಲಾಳ್, ಪಡುಮಾರ್ನಾಡು ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಮಾಜಿ ಸದಸ್ಯರಾದ ಸೂರಜ್ ಜೈನ್, ಸೂರಜ್ ಬನ್ನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಎಸ್. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಎಂಸಿಎಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರಣೇಂದ್ರ ಜೈನ್ ವಂದಿಸಿದರು.