ಬೆಂಗಳೂರು: ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ನ.07ರಂದು (ಭಾನುವಾರ) ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಹೌದು, ಭಾನುವಾರ ಸಂಜೆ 6 ಗಂಟೆಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಅಗಲಿದ ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ರಾಜ್ಯದ ಎಲ್ಲ ಚಿತ್ರಮಂದಿರಗಳು, ಪ್ರೇಕ್ಷಕರು, ಅಭಿಮಾನಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಭಾನುವಾರ ರಾಜ್ಯದಲ್ಲಿರುವ ಎಲ್ಲಾ ಥಿಯೇಟರ್ ಮುಂದೆ ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಹಾಗೂ ಭಾಷ್ಪಾಂಜಲಿ ಕಾರ್ಯಕ್ರಮ ನಡೆಯಲಿದೆ.
ಪುನೀತ್ ರಾಜ್‌ಕುಮಾರ್‌ಗೆ ಚಿತ್ರರಂಗದಿಂದ ಶ್ರದ್ಧಾಂಜಲಿ
ಅಗಲಿದ ಅಪ್ಪುಗೆ ನ.16 ರಂದು ಶ್ರದ್ಧಾಂಜಲಿ ಸಲ್ಲಿಸಲು ಕನ್ನಡ ಚಿತ್ರರಂಗ ತೀರ್ಮಾನಿಸಿದೆ. ಈ ಸಂಬಂಧ ಇಂದು(ಶನಿವಾರ) ನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬೆಳಗ್ಗೆ 11.30ಕ್ಕೆ ತುರ್ತು ಕಾರ್ಯ ಕಾರಿಣಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಭೆಯಲ್ಲಿ ಭಾಗಿಯಾಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲು ಕನ್ನಡ ಚಿತ್ರರಂಗ ತೀರ್ಮಾನಿಸಿದೆ. ಈ ಸಂಬಂಧ ಇಂದು ಫಿಲ್ಮ್ ಚೇಂಬರ್‌ನಲ್ಲಿ ನಡೆಲಿರುವ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯನ್ನ ಸಿದ್ಧಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪ್ಪು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡುಗಳಿಗೆ ಗುರುಕಿರಣ್ ರಾಗ ಸಂಯೋಜನೆ ಮಾಡಿ ಹಾಡಲಿದ್ದಾರೆ. ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌ನ ಸ್ಟಾರ್‌ಗಳಿಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ನ. 8ಕ್ಕೆ ಪುನೀತ್ ಪುಣ್ಯತಿಥಿ: ನ. 9ಕ್ಕೆ ಅನ್ನ ಸಂತರ್ಪಣೆ
ನಟ ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿಯನ್ನು ನ.8ರಂದು ನಡೆಸಲು ಡಾ.ರಾಜ್‌ಕುಮಾರ್ ಕುಟುಂಬದವರು ನಿರ್ಧರಿಸಿದ್ದಾರೆ. ಪುನೀತ್ ಅಗಲಿದ 11ನೇ ದಿನಕ್ಕೆ ಪುಣ್ಯತಿಥಿ ನಡೆಯಲಿದ್ದು, ಕುಟುಂಬದವರು, ನೆಂಟರು, ಸ್ನೇಹಿತರು ಹಾಗೂ ಆಪ್ತರು ಈ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊದಲ ದಿನದ ಕಾರ್ಯವು ಕೇವಲ ಕುಟುಂಬದವರ ಸಮ್ಮುಖದಲ್ಲೇ ಖಾಸಗಿಯಾಗಿ ನಡೆಯಲಿದೆ ಎಂದು ತಿಳಿದು ಬಂದಿದೆ. ನ.9ರಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಪುಣ್ಯ ತಿಥಿಯ ಅಂಗವಾಗಿ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಚಿತ್ರರಂಗದ ಎಲ್ಲ ವಿಭಾಗದವರು ಕೂಡ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕುಟುಂಬದವರು, ಚಿತ್ರರಂಗದವರು ಹಾಗೂ ಅಭಿಮಾನಿಗಳನ್ನು ಒಳಗೊಂಡು ಒಂದೇ ದಿನ ತಿಥಿ ಕಾರ್ಯ ಮಾಡಿದರೆ ಎಲ್ಲರೂ ಭಾಗವಹಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮೊದಲ ದಿನ ಕುಟುಂಬದವರು ಮಾತ್ರ ಹಾಜರಿದ್ದು, ತಿಥಿ ಕಾರ್ಯ ನೆರವೇರಿಸಲಿದ್ದಾರೆ. ನ.9ರಂದು ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಹಾಗೂ ಸಾರ್ವಜನಿಕರನ್ನು ಒಳಗೊಂಡ ಕಾರ್ಯವು ಅರಮನೆ ಮೈದಾನದಲ್ಲಿ ನಡೆಯಲಿದೆ.
ಆಂಧ್ರದಲ್ಲೇ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಅಲ್ಲು ಅರ್ಜುನ್!
ಟಾಲಿವುಡ್‌ನ ಖ್ಯಾತ ನಟ ಅಲ್ಲು ಅರ್ಜುನ್ ಅವರೂ ಕೂಡ ಅಗಲಿದ ಪುನೀತ್ ರಾಜ್‌ಕುಮಾತ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲು ಅರ್ಜುನ್ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗ, ದಕ್ಷಿಣ ಭಾರತ ಹಾಗೂ ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟಉಂಟಾಗಿದೆ ಎಂದು ಹೇಳಿದ್ದರು. ಬಳಿಕ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡುಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು.
