ಉಡುಪಿ: ಜಿಲ್ಲೆಯಲ್ಲಿ ಸದಾ ಚಾಲ್ತಿಯಲ್ಲಿರುವ ಗೋವು ಕಳ್ಳತನ ಇಂದೂ ಮುಂದುವರೆದಿದೆ. ಕಾರ್ಕಳ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಗೋವು ಕಳ್ಳತನವಾಗುತ್ತಿದ್ದು ಯುಗಾದಿ ದಿನವೂ ದುಷ್ಟರ ಅಟ್ಟಹಾಸ ಮುಂದುವರಿದಿದೆ.
ಸರ್ಕಾರಕ್ಕೆ ಕಾನೂನು-ಸುವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ರಾಜಾರೋಷವಾಗಿ ದನಕಳ್ಳತನವನ್ನು ದುಷ್ಕರ್ಮಿಗಳು ಉಡುಪಿ ಜಿಲ್ಲೆಯಲ್ಲಿ ಮುಂದುವರೆಸಿದ್ದಾರೆ. ಬೆಳಗ್ಗಿನ ಜಾವ 2.45ಕ್ಕೆ ದುಬಾರಿ ಕಾರಿನಲ್ಲಿ ಬಂದ ಗೋಕಳ್ಳರು ರಸ್ತೆ ಬದಿಯಲ್ಲಿದ್ದ ನಾಲ್ಕೈದು ದನಗಳನ್ನು ಕಳ್ಳತನ ಮಾಡಿದ್ದಾರೆ. ಈ ಪೈಕಿ ಒಂದು ದನ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳಿಗೆ ಕದೀಮರು ಹಿಂಡಿ ಆಸೆ ತೋರಿಸಿದ್ದಾರೆ. ಬಕೆಟ್ನಲ್ಲಿ ಇದ್ದ ಹಿಂಡಿಯನ್ನು ಹಸು ತಿನ್ನುವ ಸಂದರ್ಭ ಅಮಾನುಷವಾಗಿ ಕುತ್ತಿಗೆಯನ್ನು ತಿರುವಿ, ಕೊಂಬು ಹಿಡಿದು ಎಳೆದಾಡಿ ಕಾರಿನ ಹಿಂಬದಿ ಸಿಟಿಗೆ ಹಸುವನ್ನು ತುಂಬಿಸಿದ್ದಾರೆ. ಕ್ಷಣಮಾತ್ರದಲ್ಲಿ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಗೋ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ನಗರದಲ್ಲಿ ಎಗ್ಗಿಲ್ಲದೆ ಗೋವು ದರೋಡೆ ಪ್ರಕರಣಗಳು ನಡೆಯುತ್ತಿದ್ದರೂ, ಪೊಲೀಸರು ಈವರೆಗೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಬಹಳ ಸಂಶಯಕ್ಕೆ ಕಾರಣವಾಗಿದೆ.