ಮಂಗಳೂರು: ಗೋವಾದಿಂದ ಮಾದಕವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಕೃಷ್ಣಾಪುರ ನಿವಾಸಿ ಮೊಹಮ್ಮದ್ ನಿಯಾಜ್ (28), ತಲಪಾಡಿಯ ನಿಷಾದ್ (31), ಮಹಮ್ಮದ್ ರಝೀನ್ (24) ಎಂದು ಗುರುತಿಸಲಾಗಿದೆ.
ಆರೋಪಿಗಳು ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿರೂರು ಎಂಬಲ್ಲಿ ಎರಡು ಕಾರಿನಲ್ಲಿ ಬಂದು ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಒಟ್ಟು 180 ಗ್ರಾಂ ತೂಕದ 9ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ ಕುಮಾರ್ ಜೈನ್ ತಿಳಿಸಿದರು.
ಬಂಧಿತರಿಂದ ಎರಡು ಸ್ವಿಫ್ಟ್ ಕಾರು, ನಾಲ್ಕು ಮೊಬೈಲ್, 22,050 ನಗದು, ಒಂದು ಪಿಸ್ತೂಲ್, ಒಂದು ಸಜೀವ ಗುಂಡು, ಎರಡು ಡ್ರಾಗನ್ ಚೂರಿಗಳು, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ ಎಂದರು.
ಮುಂಬೈ ಗೋವಾದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಇನ್ನಷ್ಟು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.