ಉಳ್ಳಾಲ: ಸ್ಕೂಟರ್ ಕಳವುಗೈದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ನಿವಾಸಿಗಳಾದ ಸಂತೋಷ ಗೋವಿಂದಪ್ಪ ಬಾಳೂರು(31) ಹಾಗೂ ಪ್ರವೀಣ್ ಕುಮಾರ್ (25) ಎಂಬವರನ್ನು ಬಂಧಿಸಲಾಗಿದೆ.
ನ. 9 ರಂದು ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಜೆಪ್ಪು ನಿವಾಸಿ ಮೊಹಮ್ಮದ್ ಶಕೀಬ್ ನಿಲ್ಲಿಸಿದ್ದ ಆಕ್ಸೆಸ್ ಸ್ಕೂಟರ್ ನ್ನು ಕಳವು ನಡೆಸಲಾಗಿತ್ತು. ಆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಲಾಗಿತ್ತು.
ಮೇ 16 ರಂದು ಕೋಟೆಕಾರು ಜಂಕ್ಷನ್ ಬಳಿ ಉಳ್ಳಾಲ ಠಾಣಾ ಪಿಎಸ್ ಐ ಶಿವಕುಮಾರ್ ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುವ ಸಂದರ್ಭ ನಂಬರ್ ಪ್ಲೇಟ್ ಇಲ್ಲದ ಸ್ಕೂಟರನ್ನು ತಡೆದು ತಪಾಸಣೆ ನಡೆಸಿದ್ದರು.
ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಸ್ಕೂಟರಿನಲ್ಲಿದ್ದ ಇಬ್ಬರನ್ನು ಹಾಗೂ ಸ್ಕೂಟರನ್ನು ವಶಕ್ಕೆ ಪಡೆಯಲಾಗಿತ್ತು.ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಸ್ಕೂಟರನ್ನು ಕಳವು ನಡೆಸಿ ನಂಬರ್ ಪ್ಲೇಟ್ ತೆಗೆದು ಸ್ವಂತಕ್ಕೆ ಉಪಯೋಗಿಸುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅದರಂತೆ ಇಬ್ಬರನ್ನು ಬಂಧಿಸಲಾಗಿದೆ.
ಉಳ್ಳಾಲ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ನಿರ್ದೇಶನದಡಿ ಉಪ ನಿರೀಕ್ಷಕರುಗಳಾದ ಪ್ರದೀಪ್ ಟಿ.ಆರ್ , ಶಿವಕುಮಾರ್ ಕೆ.ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

