ಕಡಬ: ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ಕಡಬ ಇಲ್ಲಿನ ಕಳಾರ ಸಮೀಪದಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ಮತ್ತು ಪುಟಾಣಿ ತಂಗಿ ಗಂಭೀರ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸರಸ್ವತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ ಬಾಲಕ ತಮ್ಮ ನಿವಾಸಕ್ಕೆ ತಲುಪುವ ಸುಮಾರು ನೂರು ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿದೆ. ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಚಾಲಕ ಪಂಜ ಸಮೀಪದ ಪರಮೇಶ್ವರ ಎಂಬವರ ಅವಾಂತರಕ್ಕೆ ಬಾಲಕ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು ಮದ್ಯದ ಬಾಟಲಿ, ಸಿಗರೇಟ್ ಪ್ಯಾಕ್ ಗಳು ಕಾರಿನ ಸೀಟಿನಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕಡಬ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
©2021 Tulunada Surya | Developed by CuriousLabs