ಮುಲ್ಕಿ: ಇಲ್ಲಿನ ಬಪ್ಪನಾಡು-ವಿಜಯ ಕಾಲೇಜು ರಸ್ತೆಯ ಕಾಲೇಜ್ ಬಳಿ ಬೈಕ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೃತ ಸ್ಕೂಟರ್ ಸವಾರನನ್ನು ಅತಿಕಾರಿಬೆಟ್ಟು ಕಕ್ವ ನಿವಾಸಿ ಮನೀಶ್ ಪೂಜಾರಿ( 21) ಎಂದು ಗುರುತಿಸಲಾಗಿದ್ದು ಗಾಯಗೊಂಡ ಬೈಕ್ ಸವಾರ ಕವತ್ತಾರು ನಿವಾಸಿ ದೀಕ್ಷಿತ್ ರಾವ್ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಪ್ಪನಾಡು ಕಡೆಯಿಂದ ಕವತ್ತಾರು ಕಡೆಗೆ ಹೋಗುತ್ತಿದ್ದ ಬೈಕ್ ಹಾಗೂ ಕಕ್ವ ದಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಮುಲ್ಕಿ ವಿಜಯ ಕಾಲೇಜು ಬಳಿ ವಾಹನವನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ
ಅಪಘಾತದ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು ಸವಾರರಿಬ್ಬರು ಗಂಭೀರ ಗಾಯಗೊಂಡು ಸ್ಥಳದಲ್ಲಿ ಒದ್ದಾಡುತ್ತಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ನಪಂ ಸದಸ್ಯ ಬಾಲಚಂದ್ರ ಕಾಮತ್ ಹಾಗೂ ಪುಷ್ಪರಾಜ್ ಕೊಲಕಾಡಿ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತ ಮನೀಶ್ ಹಾಗೂ ಗಾಯಾಳು ದೀಕ್ಷಿತ್ ರಾವ್ ಕ್ರಮವಾಗಿ ಮುಲ್ಕಿ ವಿಜಯ ಕಾಲೇಜು ಅಂತಿಮ ಹಾಗೂ ದ್ವಿತೀಯ ಬಿಸಿಎ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
