ಲಕ್ನೋ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಬಳಿಕ ಅದೇ ಹೆಸರಿನ ಯುವತಿಯೊಬ್ಬರು ಇದೀಗ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಹೌದು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪರೀಕ್ಷೆಯಲ್ಲಿ ಸಾನಿಯಾ ಮಿರ್ಜಾ ಅವರು 149ನೇ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದ್ರೆ ಉತ್ತರ ಪ್ರದೇಶದ ಮಿರ್ಜಾಪುರದ ಸಾನಿಯಾ, ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಎನಿಸಿಕೊಳ್ಳಲಿದ್ದಾರೆ.
ಎನ್‌ಡಿಎ ಪರೀಕ್ಷೆಯಲ್ಲಿ ಮಹಿಳೆಯರಿಗೆ ಮೀಸಲಿಟ್ಟ 19 ಸೀಟುಗಳಲ್ಲಿ ಸಾನಿಯಾ 2ನೇ ಸ್ಥಾನ ಪಡೆದಿದ್ದಾರೆ. ಅವನಿ ಚತುರ್ವೇದಿ ಅವರು ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅವರ ಜತೆಗೆ ಮೋಹನಾ ಸಿಂಗ್ ಜಿತರ್ವಾಲ್ ಮತ್ತು ಭಾವನಾ ಕಾಂತ್ ಕೂಡ ಯುದ್ಧ ವಿಮಾನಗಳನ್ನು ಹಾರಿಸಿದ ಮಹಿಳೆಯರ ಸಾಲಿನಲ್ಲಿ ಸೇರಿದ್ದಾರೆ.
ಯಾರಿದು ಸಾನಿಯಾಮಿರ್ಜಾ?
ಸಣ್ಣ ಗ್ರಾಮದಿಂದ ಬಂದ ಸಾನಿಯಾ ಮಿರ್ಜಾ, ತಮ್ಮ ಗ್ರಾಮದ ಪಂಡಿತ್ ಚಿಂತಾಮಣಿ ದುಬೆ ಅಂತರ್ ಕಾಲೇಜಿನಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದರು. 10ನೇ ತರಗತಿ ಬಳಿಕ ಮಿರ್ಜಾಪುರದ ಗುರು ನಾನಕ್ ಬಾಲಕಿಯರ ಅಂತರ್ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು. 12ನೇ ತರಗತಿಯಲ್ಲಿ ಉತ್ತರ ಪ್ರದೇಶ ಪರೀಕ್ಷಾ ಮಂಡಳಿಯಲ್ಲಿ ಮಿರ್ಜಾಪುರಕ್ಕೆ ಟಾಪರ್ ಆಗಿದ್ದರು.
2022ರ ಏಪ್ರಿಲ್‌ನಲ್ಲಿ ಎನ್‌ಡಿಎ ಪರೀಕ್ಷೆಗೆ ಹಾಜರಾದ ಸಾನಿಯಾ, ಇದೀಗ 149ನೇ ರ‍್ಯಾಂಕ್ ಪಡೆಯುವ ಮೂಲಕ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ. ಸಾನಿಯಾ ಅವರು ಡಿ. 27ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಎನ್‌ಡಿಎ ಖಾಡಕ್ವಲ್ಸಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿರೀಕ್ಷೆಯಂತೆ ನಡೆದರೆ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಯ ಯುದ್ಧ ವಿಮಾನದ ಮೊದಲ ಮುಸ್ಲಿಂ ಪೈಲಟ್ ಎನಿಸಿಕೊಳ್ಳಲಿದ್ದಾರೆ.
