ಬೆಂಗಳೂರು : ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ವಿವಿಧ ಉದ್ದೇಶಗಳ ಮಹಿಳಾ ಸಹಕಾರಿ ಸಂಘಗಳನ್ನು ( Women’s Co-operative Society ) ಸರ್ಕಾರದ ಶೇ. 90 ರಷ್ಟು ಷೇರು ಬಂಡವಾಳದೊಂದಿಗೆ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದ್ದಾರೆ.
ಈ ಮೂಲಕ ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಭಾನುವಾರದಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು – ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿಯಮಿತ, ಬೆಂಗಳೂರು ಮತ್ತು ಸಹಕಾರ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಸಹಕಾರ ರಂಗದ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗುವಂತೆ ಉತ್ತೇಜಿಸಲು ಸದಸ್ಯತ್ವ ಶುಲ್ಕವನ್ನು ಸರ್ಕಾರದಿಂದ ಪಾವತಿಸಲಾಗುವುದು. ದುಡಿಯುವ ವರ್ಗ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಸಹಕಾರಿ ರಂಗ ಯಶಸ್ವಿಯಾಗುತ್ತದೆ. ಮಹಿಳೆಯರು ದುಡಿಮೆಯ ಕ್ಷಮತೆಯುಳ್ಳವರು, ಅವರಿಂದ ರಾಜ್ಯದ ತಲಾವಾರು ಆದಾಯ ಹೆಚ್ಚಾಗುವುದಲ್ಲದೇ ರಾಜ್ಯದ ಆರ್ಥಿಕತೆಯೂ ಹೆಚ್ಚುತ್ತದೆ. ಸಹಕಾರ ರಂಗದಲ್ಲಿ ಬದ್ಧತೆ,ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಶ್ರಮ ಬಹಳ ಮುಖ್ಯ. ಸಹಕಾರಿ ಕ್ಷೇತ್ರ ಬೆಳೆದರೆ ರಾಜ್ಯ ನಂ.1 ಆಗುತ್ತದೆ.ಸಹಕಾರಿ ಕ್ಷೇತ್ರದಿಂದ ಔದ್ಯೋಗಿಕ ಕ್ರಾಂತಿಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಶೀಘ್ರದಲ್ಲಿಯೇ ಕಾರ್ಯಾದೇಶ
ಕರ್ನಾಟಕದಲ್ಲಿ ಹಾಲು ಉತ್ಪಾದನೆ ಸಹಕಾರ ಸಂಘಗಳ ವಾರ್ಷಿಕ ಆದಾಯ 36000 ಕೋಟಿ ರೂ.ಗಳಷ್ಟಿದೆ. ಪತಿ ತಿಂಗಳು 300 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಾಲು ಉತ್ಪಾದಕ ಸಂಘಗಳು ಪಾವತಿ ಮಾಡುತ್ತಾರೆ. ಉತ್ಪಾದನೆಯ ಲಾಭ ಹಾಲು ಉತ್ಪಾದಕರಿಗೆ ಹೋಗಬೇಕೆನ್ನುವ ದೃಷ್ಟಿಯಿಂದ ಹಾಲು ಉತ್ಪಾದಕರ ಬ್ಯಾಂಕ್ ಸ್ಥಾಪನೆ ಮಾಡಲು ಸರ್ಕಾರ ಬಜೆಟ್ ನಲ್ಲಿ 100 ಕೋಟಿ ಅನುದಾನ ನೀಡಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ನಿರ್ಧಾರ ಮಾಡಿದ್ದು, ಕಾರ್ಯಾದೇಶವನ್ನು ಅತಿ ಶೀಘ್ರವಾಗಿ ನೀಡಲಿದೆ .ಪ್ರತಿ ತಾಲ್ಲೂಕಿನಲ್ಲಿ ಬ್ಯಾಂಕ್ ಇರಲಿದೆ. ಅವರಿಗೆ ಸುಲಭದಲ್ಲಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಇದನ್ನು ಸರಿಯಾಗಿ ನಡೆಸಿದ್ದೇ ಆದಲ್ಲಿಅಪೆಕ್ಸ್ ಬ್ಯಾಂಕ್ ಗೆ ಸರಿಸಮಾನವಾಗಿ ಇದು ನಡೆಯಲಿದೆ ಎಂದರು.
ರೈತರಿಗಾಗಿ ಯಶಸ್ವಿನಿ ಯೋಜನೆಯನ್ನು ಪುನಃ ಪ್ರಾರಂಭಿಸಾಗಿದೆ. ರೈತರಿಗೆ ಯಂತ್ರೋಪಕರಣಗಳ ಡೀಸೆಲ್ ಗಾಗಿ 500 ಕೋಟಿ ರೂ. ಮೀಸಲಿಟ್ಟಿದೆ.ಈ ಬಾರಿ 33 ಲಕ್ಷ ರೈತರಿಗೆ ಸಾಲ ನೀಡುವ ಗುರಿಯಿದ್ದು ಇದರ ಶ್ರೇಯಸ್ಸು ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಸೇರಬೇಕು ಎಂದರು.
ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿಯ ಫಲವಾಗಿ 10 ಹೆಚ್.ಪಿ ಪಂಪ್ ಸೆಟ್ ಗಳಿಗೆ 12 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ವಿದ್ಯುತ್ ಇಲಾಖೆಗೆ ರೈತರ ಪರವಾಗಿ ಭರಿಸುತ್ತಿದೆ. ಪ್ರಧಾನ ಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯಡಿ 45 ಲಕ್ಷ ರೈತರಿಗೆ 2800 ಕೋಟಿ ರೂ. ಗಳನ್ನು ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿದೆ ಎಂದರು.
ಸಹಕಾರ ಕ್ಷೇತ್ರ ಬೆಳೆಯಲು ಹಿರಿಯರ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಕಾರಣ
ಇಡೀ ಏಷ್ಯಾ ಖಂಡದ ಮೊದಲ ಸಹಕಾರಿ ಬ್ಯಾಂಕ್ ಸ್ಥಾಪನೆ ಯಾಗಿದ್ದು ಕರ್ನಾಟಕದಲ್ಲಿ. ಗದಗ ಜಿಲ್ಲೆಯ ಕಣಗಿನಹಾಳದ ಸಹಕಾರಿ ಮೂಲ ಪುರುಷ ಎಸ್.ಎಸ್ ಪಾಟೀಲರ ಮೂರ್ತಿ ಸ್ಥಾಪನೆಗೆ ವಹಿಸಿದ ಕ್ರಮ ವಹಿಸಿದ್ದನ್ನು ಮುಖ್ಯ ಮಂತ್ರಿಗಳು ಸ್ಮರಿಸಿದರು. ಸಹಕಾರ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳೆಯಲು ಹಿರಿಯರ ನಿಸ್ವಾರ್ಥ ಸೇವೆ ಮತ್ತು ತ್ಯಾಗದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.