ಕುಂದಾಪುರ: ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮೊಹಮ್ಮದ್ ಸುಭಾನ್ ಎಂಬ ಯುವಕನನ್ನು 6 ತಿಂಗಳ ಕಾಲ ಚಳ್ಳಕೆರೆ ಉಪವಿಭಾಗಕ್ಕೆ ಗಡಿಪಾರು ಮಾಡಿ ಕುಂದಾಪುರ ಉಪವಿಭಾಗ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಜಾಮಿಯಾ ಮೊಹಲ್ಲಾ ಮೀನು ಮಾರ್ಕೆಟ್ ಬಳಿಯ ನಿವಾಸಿ ಸಿರಾಜ್ ರವರ ಮಗ ಮೊಹಮ್ಮದ್ ಸುಭಾನ್(25) , ರೌಡಿ ಪ್ರವೃತ್ತಿ ಹೊಂದಿದವನಾಗಿದ್ದು, ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನು ತನ್ನ 20ನೇ ವಯಸ್ಸಿನಲ್ಲಿಯೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದಕ್ಕೆ ಪ್ರಾರಂಭ ಮಾಡಿದ್ದು ತನ್ನ ಸಹಚರರೊಂದಿಗೆ ಸೇರಿಕೊಂಡು ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ದನ ಕಳ್ಳತನ ಹಾಗೂ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಲ್ಲದೆ ಈತನು ಕಳೆದ 5 ವರ್ಷಗಳಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ಹಲವು ಕಾನೂನು ಕ್ರಮ ಸಹ ಜರುಗಿಸಲಾಗಿರುತ್ತದೆ. ಈತನ ಗೂಂಡಾ ಪ್ರವೃತ್ತಿಗೆ ಹೆದರಿಕೊಂಡು ಹಲವರು ಈತನ ವಿರುದ್ಧ ಪೊಲೀಸ್ ಠಾಣೆಗೆ ದೂರುಗಳನ್ನು ನೀಡಲು ಮುಂದೆ ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ ಈತನ ವಿರುದ್ಧ ದಾಖಲಾದ ಪ್ರಕರಣಗಳ ಪೈಕಿ ಕೆಲವು ಪ್ರಕರಣಗಳಲ್ಲಿ ಈತನು ಬಂಧಿತನಾಗಿ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದರೂ ಸಹ ತನ್ನ ನಡವಳಿಕೆಯಲ್ಲಿ ಬದಲಾವಣೆ ತಂದುಕೊಳ್ಳದೇ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ. ಈತನ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತವೆ.
ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರ ಬಂದ ನಂತರವೂ ಕೂಡಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿರುತ್ತಾನೆ. ಆದ್ದರಿಂದ ಈ ಬಗ್ಗೆ ಮೇಲಾಧಿಕಾರಿಯವರ ಆದೇಶದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ರವರು ಕುಂದಾಪುರ ಉಪವಿಭಾಗ ದಂಡಾಧಿಕಾರಿಯವರಿಗೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯನ್ನು ಪರಿಶೀಲಿಸಿದ ಉಪವಿಭಾಗ ದಂಡಾಧಿಕಾರಿಯವರು ಅ 17 ರಂದು ಮೊಹಮ್ಮದ್ ಸುಭಾನ್ ನನ್ನು 6 ತಿಂಗಳ ಕಾಲ ಚಳ್ಳಕೆರೆ ಉಪವಿಭಾಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗೂ 6 ತಿಂಗಳ ಒಳಗೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ಕುಂದಾಪುರ ಪೊಲೀಸ್ ಉಪವಿಭಾಗದಲ್ಲಿ ಯಾವುದೇ ಕಾರಣ ಈತ ಕಂಡು ಬಂದಲ್ಲಿ ಆತನನ್ನು ಬಂಧಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ.
