ಬೆಳ್ತಂಗಡಿ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಹಾಡುಹಗಲೇ ಹತ್ಯೆಮಾಡಿದ ದರೋಡೆಕೋರರು ಆಕೆಯ ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದು ದೋಚಿದ ಆತಂಕಕಾರಿ ಘಟನೆ ಶನಿವಾರ ಮಧ್ಯಾಹ್ನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು (85) ಗಂಭೀರ ಹಲ್ಲೆಗೊಳಗಾಗಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ವೃದ್ಧೆ. ಅಕ್ಕು ಅವರು ತಮ್ಮ ಪುತ್ರ, ಸೊಸೆ ಹಾಗೂ ಮೊಮ್ಮಗಳೊಂದಿಗೆ ವಾಸವಿದ್ದರು. ಪುತ್ರ ಮತ್ತು ಸೊಸೆ ಕೆಲಸಕ್ಕೆ ಹೋಗಿದ್ದರೆ, ಮೊಮ್ಮಗಳು ಶಾಲೆಗೆ ಹೋಗಿದ್ದಳು. ಮಧ್ಯಾಹ್ನ ಹೊತ್ತಿಗೆ ಶಾಲೆ ಬಿಟ್ಟು ಮನೆಗೆ ಬಂದ ಮೊಮ್ಮಗಳು ಅಜ್ಜಿಯನ್ನು ಕರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ. ಬಳಿಕ ಆಕೆ ಹುಡುಕಾಡಿದಾಗ ಅಜ್ಜಿ ಅಕ್ಕು ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿರುವುದು ಕಂಡು ಬಂದಿದೆ.
ತಕ್ಷಣ ಆಕೆ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಅಕ್ಕು ಮೃತಪಟ್ಟಿದ್ದಾರೆ. ಅವರ ಕಿವಿಯಲ್ಲಿದ್ದ ಒಡವೆಯನ್ನು ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಅಕ್ಕುವನ್ನು ಕೊಲೆಗೈದು ಚಿನ್ನಾಭರಣ ದರೋಡೆಗೈದಿದ್ದಾರೆಂದು ಪೊಲೀಸ್ ದೂರಿನಲ್ಲಿ ದಾಖಲಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.