ಉಡುಪಿ: ಹವಾಮಾನ ಬದಲಾವಣೆಯಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ ಕಾಣಿಸಿಕೊಳ್ಳುತ್ತಿದೆ.
ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಇದರ ಲಕ್ಷಣವಾಗಿದೆ. ಇದು ಬಹುಬೇಗನೆ ಹರಡುವ ರೋಗವಾಗಿದೆ. ಬಾಧಿತರು ಪದೇ ಪದೇ ಕಣ್ಣನ್ನು ಉಜ್ಜಬಾರದು ಎನ್ನುತ್ತಾರೆ ವೈದ್ಯರು.
ಕಾರ್ಕಳದಲ್ಲಿ ಗರಿಷ್ಠ:
ಉಡುಪಿ ತಾಲೂಕಿನಲ್ಲಿ ನವೆಂಬರ್‌ನಲ್ಲಿ 60, ಡಿಸೆಂಬರ್‌ನಲ್ಲಿ ಈವರೆಗೆ 15, ಕುಂದಾಪುರ ತಾಲೂಕಿನಲ್ಲಿ ನವೆಂಬರ್‌ನಲ್ಲಿ 80, ಡಿಸೆಂಬರ್‌ನಲ್ಲಿ 117, ಕಾರ್ಕಳದಲ್ಲಿ ನವೆಂಬರ್‌ಗೆ 124, ಡಿಸೆಂಬರ್‌ನಲ್ಲಿ 395 ಮಂದಿಗೆ ಕೆಂಗಣ್ಣು ಬಾಧಿಸಿದೆ.
ಕೆಂಗಣ್ಣು ಕಾಯಿಲೆ ಅತೀ ಶೀಘ್ರವಾಗಿ ಇನ್ನೊಬ್ಬರಿಗೆ ಹರಡುತ್ತದೆ. ಈಗಾಗಲೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ರೋಗ ಬಂದು ಹೋಗಿವೆ. ಇದಕ್ಕೆಂದೇ ಕೆಲವು ವಿದ್ಯಾರ್ಥಿಗಳು ರಜೆ ತೆಗೆದುಕೊಂಡ ಘಟನೆಗಳೂ ಜಿಲ್ಲೆಯಲ್ಲಿ ನಡೆದಿವೆ.
ಶೀತ, ಜ್ವರ ಪ್ರಕರಣ:
ಜಿಲ್ಲೆಯಲ್ಲಿ ಶೀತ, ಜ್ವರ ಪ್ರಕರಣದಲ್ಲಿಯೂ ಹೆಚ್ಚಳ ಕಂಡುಬಂದಿದೆ. ನವೆಂಬರ್‌ನಲ್ಲಿ ಉಡುಪಿ ತಾಲೂಕಿನಲ್ಲಿ 1,456, ಕುಂದಾಪುರದಲ್ಲಿ 1,145, ಕಾರ್ಕಳ 1,087, ಡಿಸೆಂಬರ್ ತಿಂಗಳಲ್ಲಿ ಉಡುಪಿ ತಾಲೂಕಿನಲ್ಲಿ 324, ಕುಂದಾಪುರ 224, ಕಾರ್ಕಳದಲ್ಲಿ 191 ಮಂದಿಗೆ ವಿವಿಧ ರೀತಿಯ ಜ್ವರ ಹಾಗೂ ಶೀತ ಲಕ್ಷಣಗಳು ಕಂಡುಬಂದಿವೆ.
ದಕ್ಷಿಣ ಕನ್ನಡದಲ್ಲಿ ಇಳಿಕೆ :
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪರಿಸರದಲ್ಲಿ ನವೆಂಬರ್ ಆರಂಭದಲ್ಲಿ ಕೆಂಗಣ್ಣು ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಜಿಲ್ಲೆಯಾದ್ಯಂತ ವ್ಯಾಪಿಸಿತ್ತು. ಆರಂಭಿಕ ಪ್ರಕರಣಗಳಿಗೆ ಹೋಲಿಸಿದರೆ ಪ್ರಸ್ತುತ ಜಿಲ್ಲೆಯಲ್ಲಿ ಸೋಂಕು ಹರಡುವ ವೇಗ ಕಡಿಮೆಯಾಗಿದೆ. ಆಸ್ಪತ್ರೆಗಳಿಗೆ ಬರುವ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿದೆ ಎಂದು ನೇತ್ರ ತಜ್ಞರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಂಗಣ್ಣಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಧಿತರು ವೈದ್ಯರ ಸಲಹೆಯಂತೆ ಸೂಕ್ತ ಔಷಧ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ವಾರದೊಳಗೆ ಕೆಂಗಣ್ಣು ಗುಣಮುಖವಾಗುತ್ತದೆ. ಸೋಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕನ್ನಡಕ ಧರಿಸುವುದು ಉತ್ತಮ. ಕೈ, ಮುಖವನ್ನು ಚೆನ್ನಾಗಿ ತೊಳೆದುಕೊಂಡು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
–ಡಾ| ನಾಗರತ್ನಾ, ಉಡುಪಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ