Tuesday, April 16, 2024
spot_img
More

    Latest Posts

    ರವೀಂದ್ರನ್ ಆತ್ಮಹತ್ಯೆ ಪ್ರಕರಣ ಉನ್ನತ ಮಟ್ಟದ ತನಿಖೆಗೆ ವಸಂತ ಬಂಗೇರ ಆಗ್ರಹ

    ಬೆಳ್ತಂಗಡಿ: ಧರ್ಮಸ್ಥಳ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಆಡಳಿತ ಸಮಿತಿಯ ಮಾನಸಿಕ ಕಿರುಕುಳವೇ ಕಾರಣವಾಗಿದ್ದು ಈ ಬಗ್ಗೆ ಉನ್ನತಮಟ್ಟದ ಹಾಗೂ ನ್ಯಾಯ ಸಮ್ಮತವಾದ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಒತ್ತಾಯಿಸಿದ್ದಾರೆ.

    ಅವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಮೇ.4 ರಂದು ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ನೇತೃತ್ವದ ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಅವರಿಗೆ ಮಾನಸಿಕ ಕಿರುಕುಳ ನೀಡಿ ಒತ್ತಾಯಪೂರ್ವಕವಾಗಿ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಬಿಜೆಪಿ ಸದಸ್ಯರಿಗೆ ಬೇಕಾಬಿಟ್ಟಿಯಾಗಿ ಸಾಲ ಕೊಡಿಸಿದ್ದಲ್ಲದೆ, ಮತ್ತೆ ಸಾಲ ನೀಡಲು ಒತ್ತಾಯ ಮಾಡಿದ್ದರು. ಅದಕ್ಕೆ ಒಪ್ಪದಿದ್ದಾಗ ಬಲತ್ಕಾರವಾಗಿ ರಾಜೀನಾಮೆ ಕೊಡಿಸಿರುವುದೇ ಈ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

    ಕಳೆದ 3-4 ವರ್ಷಗಳಿಂದ ಸಹಕಾರಿ ಸಂಘದ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಆಡಳಿತ ಮಂಡಳಿ ಸದಸ್ಯರಿಗೆ ಸಾಲ ನೀಡುವ ಮೂಲಕ ಆಡಳಿತ ಮಂಡಳಿಯು ವ್ಯಾಪಕವಾಗಿ ಭ್ರಷ್ಟಚಾರ ನಡೆಸಿದ್ದು, ಈ ಬಗ್ಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದ.ಕ. ಜಿಲ್ಲಾ ಸಹಕಾರಿ ಉಪನಿಬಂಧಕರ ನೇತೃತ್ವದಲ್ಲಿ ಪ್ರತ್ಯೇಕವಾದ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇದಲ್ಲದೆ ಮುಖ್ಯ ಕಾರ್ಯಕಾರ್ಯನಿರ್ವಹಣಾಧಿಕಾರಿಯವರಿಂದ ಒತ್ತಾಯ ಪೂರ್ವಕವಾಗಿ, ಬಲತ್ಕಾರವಾಗಿ ರಾಜಿನಾಮೆ ಪಡೆದು ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆಡಳಿತ ಮಂಡಳಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

    ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಪಡಿತರ ಅಂಗಡಿಯಿಂದ ಅನ್ನಭಾಗ್ಯದ ಅಕ್ಕಿಯನ್ನು ವಾರದ ಹಿಂದೆ ಕಳವು ಮಾಡಲಾಗಿದ್ದು, ಕಳವು ಮಾಡಲಾದ ಅಕ್ಕಿಯ ಜೊತೆಗೆ ವಾಹನವನ್ನು ಬೆಳ್ತಂಗಡಿ ಪೋಲಿಸರು ಪತ್ತೆಹಚ್ಚಿದ್ದು ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಪೋಲಿಸರು ಮತ್ತು ಕಂದಾಯ ಇಲಾಖೆ ಯಾವುದೇ ಕೇಸು ದಾಖಲಿಸಿಲ್ಲ, ತಾಲೂಕಿನ ವಿವಿಧ ಪಡಿತರ ಅಂಗಡಿಗಳಿಂದ ಅಕ್ಕಿಯನ್ನು ಕಳವು ಮಾಡಲಾಗುತ್ತಿದೆಯೇ ಎಂಬ ಸಂಶಯ ಉದ್ಭವಿಸಿದೆ. ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಯವರು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

    ತಾಲೂಕಿನಲ್ಲಿ 900ಕ್ಕೂ ಹೆಚ್ಚು ಕೊರೊನಾ ಸೊಂಕಿತರಿದ್ದರೂ ಕೂಡ ತಾಲೂಕಿನ ಹಲವೆಡೆ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಿಂದಾಗಿ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ನೆರಿಯದಲ್ಲಿ ಹರೀಶ್ ಎಂಬಾತನ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಕೋವಿಡ್ ತುತ್ತಾದವರ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಜಿಲ್ಲಾಡಳಿತ ಕಾರ್ಯಕ್ರಮ ಆಯೋಜಕರ ಹಾಗೂ ಗ್ರಾಮ ಸಹಾಯಕ ಹರೀಶ್ ಎಂಬಾತನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಕೋವಿಡ್-19 ಪ್ರಾರಂಭವಾಗಿ 1 ವರ್ಷ ಕಳೆದರೂ ಕೂಡ ತಾಲೂಕು ಸಮುದಾಯ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿ ತಾಲೂಕಿನಾದ್ಯಂತ ಇರುವ ಸರಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೇರಿಲ್ಲ, ಹಲವಾರು ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳ ವ್ಯಾಪಕ ಕೊರತೆಯಿದೆ. ಈ ಬಗ್ಗೆ ಶಾಸಕರು ಕಳೆದೊಂದು ವರ್ಷಗಳಿಂದ ಮೌನವಹಿಸಿದ್ದು, ಇದೀಗ ಸೂಕ್ತ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ರಂಜನ್ ಜಿ. ಗೌಡ, ನ್ಯಾಯವಾದಿ ಮನೋಹರ ಕುಮಾರ್, ಶೇಖರ ಎಲ್, ಸಿಂಧೂ ದೇವಿ, ವಸಂತ ಬಿ.ಕೆ, ಗ್ರೇಸಿಯನ್ ವೇಗಸ್, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss