ಬೆಂಗಳೂರು: ರೈತರ ಸಭೆಯಲ್ಲಿ ಭಿನ್ನಾಭಿಪ್ರಾಯ ಮೂಡಿ ಪಾಲ್ಗೊಂಡಿದ್ದವರು ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ಇಂದು ಗಾಂಭವನದಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಮ್ಮಿಕೊಂಡಿದ್ದ ರೈತ ಚಳುವಳಿ ಆತ್ಮಾವಲೋಕನ ಸ್ಪಷ್ಟೀಕರಣ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ಸೇರಿದಂತೆ ಹಲವರಿಗೆ ಮಸಿ ಬಳಿದ ಘಟನೆಯು ನಡೆದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಆಂಗ್ಲ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ ಸಂದರ್ಭದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೆಲವರು ಅವರನ್ನು ತಡೆದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತೆರಳಿ ಸಭಿಕರ ಕುರ್ಚಿಗಳನ್ನೇ ಮೇಲೆತ್ತೆಸೆದು ಪರಸ್ಪರ ಹೊಡೆದಾಡಿಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಎಲ್ಲರನ್ನು ಸಮಾಧಾನಪಡಿಸಿ ಹೊರಗೆ ಕಳುಹಿಸಿದರು.
ಸಭೆಯನ್ನು ಹಾಳು ಮಾಡಲು ಕೆಲವರು ಷಡ್ಯಂತರ ನಡೆಸಿದ್ದಾರೆ ಎಂದು ಆಯೋಜಕರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಭೆಯನ್ನೇ ನಡೆಸುವವರು ಶಿಸ್ತಿನಿಂದ ವರ್ತಿಸಿಲ್ಲ. ರೈತರ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ರೈತರ ಆತ್ಮಾವಲೋಕನ ಸಭೆ ರಣರಂಗವಾಗಿ ಮಾರ್ಪಟ್ಟಿದ್ದು ವಿಪರ್ಯಾಸ ಎಂದು ಕೆಲವರು ಗೊಣಗುತ್ತಲೇ ಹೊರ ನಡೆದರು.
ಇದೀಗ ಕಿಡಿಗೇಡಿಗಳು ಪೊಲೀಸರ ವಶದಲ್ಲಿರುವುದು ತಿಳಿದು ಬಂದಿದೆ. ಕೂಡಲೆ ಅವರ ಉದ್ದೇಶ ಹಾಗೂ ಅವರಿಂದೆ ಇರುವ ಶಕ್ತಿಗಳ ಬಗ್ಗೆ ಪೊಲೀಸರು ತಿಳಿದುಕೊಂಡು ಸಾರ್ವಜನಿಕರಿಗೆ ತಿಳಿಸಬೇಕು ಎಂಬುದು ರೈತ ಹೋರಾಟಗಾರರ ಒತ್ತಾಯವಾಗಿದೆ. ಅಂತೆಯೇ ನಾಳೆ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕಿಡಿಗೇಡಿಗಳು ಮಾಡಿದ ಕೃತ್ಯವನ್ನು ಖಂಡಿಸುವ ಪ್ರತಿಭಟನಾ ಸಭೆ ಹಾಗೂ ಮೆರವಣಿಗೆಗಳು ನಡೆಯಲಿವೆ ಎಂದು ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಕರೆ ನೀಡಿದ್ದಾರೆ.

