ಉಡುಪಿ: ಶುಕ್ರವಾರ ತಮ್ಮ ರೈಫಲ್ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಡಿ.ಆರ್ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶನಿವಾರ ಬೆಳಿಗ್ಗೆ ರಾಜೇಶ್ ಕುಂದರ್ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಮೂವರು ಪೊಲೀಸರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಡಿಎಆರ್ ಎಪಿಸಿ ಉಮೇಶ, ಡಿಎಆರ್ ಎಪಿಸಿ ಅಶ್ಫಕ್, ಗಂಗೊಳ್ಳಿ ಠಾಣಾ ಪಿ.ಎಸ್.ಐ ನಂಜ ನಾಯ್ಕ್ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ ಸೆಕ್ಷನ್ 306ರ ಅಡಿಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ರಾತ್ರಿ ನಗರದ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಯ ಕಾವಲಿಗೆ ಮೂವರು ಡಿ.ಆರ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕುರ್ಚಿಯಲ್ಲೇ ಕುಳಿತು ಸ್ಥಿತಿಯಲ್ಲಿ ರಾಜೇಶ್ ಮೃತ ದೇಹ ಪತ್ತೆಯಾಗಿತ್ತು.
ಶನಿವಾರ ಬೆಳಿಗ್ಗೆ ರಾಜೇಶ್ ಕುಂದರ್ ಜೊತೆ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಗಣೇಶ್ ಎಂಬುವರಿಗೆ ರಾಜೇಶ್ ಅವರು ಬರೆದ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖವಾಗಿದೆ. ನಗರ ಠಾಣೆಗೆ ಡೆತ್ ನೋಟ್ ಅನ್ನು ಹಾಜರು ಪಡಿಸಲಾಗಿದ್ದು, ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

