ಮಂಗಳೂರು : ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ. ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ವತಿಯಿಂದ ನಗರದ ಐಎಂಎ ಭವನದಲ್ಲಿ ಶನಿವಾರ ನಡೆದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದರು.

ಈ ವೇಳೆ ಮಾತನಾಡಿ, ಎಲ್ಲಾ ಧರ್ಮಗಳು ಸತ್ತ ನಂತರದ ಸ್ವರ್ಗಸ್ಥರಾಗುವ ಬಗ್ಗೆ ಹೇಳುತ್ತಾರೆ. ನಮ್ಮ ಆತ್ಮ ಸ್ವರ್ಗಕ್ಕೆ ಹೋದರೂ ನಮ್ಮ ದೇಹ ಮಾತ್ರ ಇಲ್ಲಿ ಇರುತ್ತದೆ. ಆ ದೇಹದ ಮೂಲಕ ಕಡಿಮೆ ಎಂದರೆ ಐವರಿಗಾದರೂ ಜೀವನ ನೀಡಬಹುದು. ಸಾವಿನ ದವಡೆಯಲ್ಲಿರುವ ಎಷ್ಟೋ ಜನರನ್ನು ಮತ್ತಷ್ಟು ವರ್ಷ ಬದುವಂತೆ ಮಾಡಬಹುದು ಎಂದು ಹೇಳಿದರು. ಶ್ರೀಮಂತ, ಬಡವ, ಧರ್ಮ, ಸಮುದಾಯ ಹೀಗೆ ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದು ಎಂದರು. ಮುಖ್ಯ ಅತಿಥಿಯಾಗಿ ನಿಟ್ಟೆ ಡೀಮ್ಡ್ ಟು ಬಿ ಯುನಿವರ್ಸಿಟಿ ಪ್ರೊ. ಚಾನ್ಸೆಲರ್ ಡಾ ಎಂ ಶಾತಾರಾಮ ಶೆಟ್ಟಿ ಉಪಸ್ಥಿತರಿದ್ದು, ಅಂಗಾಂಗದ ಮಹತ್ವದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಅಂಗಾಂಗಗಳ ಮತ್ತು ದೇಹ ದಾನದ ಮಾಹಿತಿ ಕೈಪಿಡಿಯನ್ನು ಜಿಲ್ಲಾಧಿಕಾರಿಗಳು ಅನಾವರಣ ಮಾಡಿದರು. ಅಂಗಾಂಗ ದಾನ ಮಾಡಿದ 3 ಕುಟುಂಬಸ್ಥರನ್ನು ಸನ್ಮಾನ ಮಾಡಲಾಯಿತು. ಅಂಗಾಂಗ ದಾನ ಸ್ವೀಕರಿಸಿದವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್, ಐಎಂಎ ಅಧ್ಯಕ್ಷ ಡಾ ಸತ್ಯಮೂರ್ತಿ ಐತಾಳ್, ಡಿಎಂಒ ಡಾ ಸದಾಶಿವ ಶ್ಯಾನುಭೋಗ್, ಅಸೋಸಿಯೇಶನ್ ಡಾ ಸಚ್ಚಿದಾನಂದ ರೈ , ಮೆಡಿಕಲ್ ಅಸೋಸಿಯೇಶನ್‌ನ ಡಾ. ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಕುಸುಮಾಧರ್, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಸಿ ಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು.

