ಬೆಂಗಳೂರು: ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೊಅಲರ್ಟ್ ನೀಡಿದೆ. ಇಂದು (ಮೇ 10) ರಾಜ್ಯದೆಲ್ಲೆಡೆ ಮಳೆಯಾಗಲಿದ್ದು, ಮತದಾರರು ಮಧ್ಯಾಹ್ನದೊಳಗೆ ಮತಚಲಾವಣೆ ಮಾಡಿ ಬಂದರೆ ಒಳ್ಳೆಯದು ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ. ‘‘ಮಳೆ ಬೆಳಗ್ಗೆಯಿಂದಲೇ ಆರಂಭವಾಗುವುದಿಲ್ಲ. ಬೆಳಗಿನಿಂದ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ 2 ಗಂಟೆ ನಂತರ ಅಥವಾ ಸಾಯಂಕಾಲ ಅಥವಾ ರಾತ್ರಿ ವೇಳೆ ಮಳೆಯಾಗುತ್ತದೆ, ಎಂದು ಹವಾಮಾನ ತಜ್ಞ ಎ. ಪ್ರಸನ್ನ ತಿಳಿಸಿದ್ದಾರೆ. ಬೆಂಗಳೂರು, ರಾಮನಗರ, ಮೈಸೂರು, ಹಾಸನ, ಚಾಮರಾಜನಗರ, ಕೋಲಾರ, ಬಳ್ಳಾರಿ, ಕೊಡಗು, ಧಾರವಾಡ ಸೇರಿದಂತೆ ರಾಜ್ಯದ ಒಳನಾಡಿನ ಹಲವೆಡೆ ಮಳೆಯಾಗಿದೆ. ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ.