ಕೃತಕವಾಗಿ ಟ್ರಾಫಿಕ್ ಜಾಮ್ ಸನ್ನಿವೇಶ ಸೃಷ್ಟಿಸಿ, ರಾಹುಲ್ ದ್ರಾವಿಡ್ ಅವರ ಮೇಲೆ ಅರಚಾಡಿ ಕೋಪ ಭರಿಸುವ ಪ್ರಯತ್ನಗಳಾಗಿದ್ದವು. ಆದರೆ, ಜಾಹೀರಾತು ತಯಾರಕ ಎಣಿಕೆಯಂತೆ ರಾಹುಲ್ ಅವರಿಗೆ ಸಿಟ್ಟು ಬರಲೇ ಇಲ್ಲ. ಕೋಪಬಂದವರಂತೆ ಅದ್ಭುತವಾಗಿ ಅಭಿನಯಿಸಿದ್ದರು.
ರಾಹುಲ್ ದ್ರಾವಿಡ್ ಅವರು ನಟಿಸಿರುವ ಕ್ರೆಡ್ ಜಾಹೀರಾತು ಇನ್ನೂ ಟ್ರೆಂಡಿಂಗ್ನಲ್ಲಿದೆ. ಬಹುತೇಕ ಭಾರತೀಯರು ದ ವಾಲ್ ಅಭಿನಯಕ್ಕೆ ಫಿದಾ ಆಗಿಹೋಗಿದ್ದಾರೆ. ಇಂದಿರಾ ನಗರ್ ಕಾ ಗೂಂಡಾ ಎನ್ನುವ ಅವರ ಡೈಲಾಗ್ ಈಗ ಹಲವು ಮೀಮ್ಗಳಿಗೆ ಎಡೆ ಮಾಡಿಕೊಟ್ಟಿದೆ. ಹೊಡೆದಾಕಿ ಬಿಡ್ತೀನಿ ಅಂತ ಕನ್ನಡದಲ್ಲಿ ಅವರ ಡೈಲಾಗ್ ಕೂಡ ಕನ್ನಡಿಗರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಹಳ ಸೂಕ್ಷ್ಮವಾಗಿ ಹಾಗೂ ಸ್ಪಷ್ಟವಾಗಿ ಇಲ್ಲಿ ಅನಾವರಣಗೊಳಿಸಲಾಗಿದೆ. ಬೆಂಗಳೂರಿಗರ ಟ್ರಾಫಿಕ್ ಹತಾಶೆಯ ಪ್ರತಿರೂಪವಾಗಿ ರಾಹುಲ್ ದ್ರಾವಿಡ್ ನಟಿಸಿ ಸೈ ಎನಿಸಿದ್ದಾರೆ.
ಕ್ರೆಡ್ ಎಂಬ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಆ್ಯಪ್ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಅವರ ಭಯಾನಕ ಮುಖ ಅನಾವರಣಗೊಂಡಿದೆ. ಕ್ರೆಡ್ನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನ ಪಾವತಿಸಿದರೆ ಕ್ರೆಡ್ ಕಾಯಿನ್ಸ್ ಸಿಗುತ್ತದೆ. ಅವುಗಳನ್ನ ಬಳಸಿ ಕ್ಯಾಷ್ ಬ್ಯಾಕ್ ಹಾಗೂ ಬಹುಮಾನ ಪಡೆಯಬಹುದು. ಇದನ್ನು ನೀವು ನಂಬಲು ಸಾಧ್ಯವಾಗದೇ ಹೋಗಬಹುದು. ರಾಹುಲ್ ದ್ರಾವಿಡ್ಗೆ ಕೋಪ ಬರುತ್ತೆ ಎಂದು ಹೇಳಿದಂತೆ ನಿಮಗೆ ಭಾಸವಾಗುತ್ತದೆ ಎಂದು ಈ ಜಾಹೀರಾತಿನಲ್ಲಿ ನಿರೂಪಕರು ಹೇಳುವುದರೊಂದಿಗೆ ರಾಹುಲ್ ದ್ರಾವಿಡ್ ಅವರ ಟ್ರಾಫಿಕ್ ಸನ್ನಿವೇಶ ತೆರೆದುಕೊಳ್ಳುತ್ತದೆ. ಅಲ್ಲಿ ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ರಾಹುಲ್ ದ್ರಾವಿಡ್ ಥರಹೇವಾರಿ ಕೋಪ ಪ್ರದರ್ಶನ ತೋರುತ್ತಾರೆ. ಪಕ್ಕದ ವೃದ್ಧೆಯೊಬ್ಬರ ಕಾರಿಗೆ ತಮ್ಮ ಡ್ರಿಂಕ್ಸ್ ಎರಚಿ ಕಿರುಚುತ್ತಾರೆ. ಕಮ್ ಮ್ಯಾನ್ ಕಮ್ ಎಂದು ಮತ್ತೊಬ್ಬರಿ ಆವಾಜ್ ಹಾಕುತ್ತಾರೆ. ಹೊಡೆದಾಕಿಬಿಡ್ತೀನಿ ಅಂತ ಯುವಕನೊಬ್ಬನನ್ನು ಬೆದರಿಸುತ್ತಾರೆ. ಬೇರೆ ಕಾರುಗಳ ಮಿರರ್ ಅನ್ನು ಬ್ಯಾಟಿಂಗ್ ಹೊಡೆದುಹಾಕಿ ಅಟ್ಟಹಾಸ ಮಾಡುತ್ತಾರೆ. ಕಾರಿನ ಮೇಲೆ ತಲೆ ಎತ್ತಿ ಮೈ ಇಂದಿರಾ ನಗರ್ ಕಾ ಗೂಂಡಾ ಹೂ ಎಂದು ಹೂಂಕರಿಸಿ ಅಬ್ಬರಿಸುತ್ತಾರೆ. ಇದು ಜಾಹೀರಾತಿನಲ್ಲಿ ಕಂಡ ರಾಹುಲ್ ದ್ರಾವಿಡ್ ಮುಖ.
ರಾಹುಲ್ ದ್ರಾವಿಡ್ ಅವರ ಆಟವನ್ನು ನೋಡಿದವರಿರಲಿ, ಅವರನ್ನ ಹತ್ತಿರದಿಂದ ಬಲ್ಲವರೂ ಕೂಡ ದ್ರಾವಿಡ್ ಅವರಿಂದ ಈ ನಡತೆಯನ್ನು ಯಾವತ್ತೂ ಕಂಡವರಲ್ಲ. ಆದರೆ, ದ್ರಾವಿಡ್ ಅವರ ಅಭಿನಯ ಮಾತ್ರ ಎಲ್ಲರನ್ನೂ ಮಂತ್ರಮುಗ್ಧವಾಗಿಸಿದೆ. ರಾಹುಲ್ ದ್ರಾವಿಡ್ ಅವರಿಗಷ್ಟೇ ಅಲ್ಲ, ಈ ಜಾಹೀರಾತು ರೂಪಿಸಿದ ತಂಡಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಅಷ್ಟಕ್ಕೂ ಯಾರು ಈ ಜಾಹೀರಾತಿನ ಪರಿಕಲ್ಪನೆ ಮಾಡಿ ಶೂಟ್ ಮಾಡಿದ್ದು?
ಕೆಎಂ ಅಯ್ಯಪ್ಪ ಎಂಬುವರು ಈ ಜಾಹೀರಾತಿನ ನಿರ್ದೇಶಕರು. ಖ್ಯಾತ ಆಲ್ ಇಂಡಿಯಾ ಬಕ್ಚೋದ್ ತಂಡದ ಸದಸ್ಯ ತನ್ಮಯ್ ಭಟ್ ಮತ್ತಿತರರು ಸೇರಿ ಜಾಹೀರಾತಿಗೆ ಮಾತುಗಳನ್ನ ಬರೆದಿದ್ದಾರೆ. ರಾಹುಲ್ ದ್ರಾವಿಡ್ ಜೊತೆ ಸೇರಿ ಈ ಜಾಹೀರಾತು ಶೂಟ್ ಮಾಡಿದ ಅನುಭವವನ್ನು ಇವರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತೆರೆದಿಟ್ಟಿದ್ದಾರೆ.
ಪ್ರತೀ ಬಾರಿ ಕಿರುಚುವಾಗಲೂ ರಾಹುಲ್ ದ್ರಾವಿಡ್ ಅವರು ತಮ್ಮ ಹಣೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. ಅಯ್ಯೋ ನಾನೇನು ಮಾಡಿದೆ? ನಾನ್ಯಾಕೆ ಹೀಗೆ ಮಾಡುತ್ತಿದ್ದೇನೆ ಎಂಬಂತಿರುತ್ತಿತ್ತು ಎಂದು ಕೆಎಂ ಅಯ್ಯಪ್ಪ ಹೇಳುತ್ತಾರೆ.
“ನಮಗೆ ಸಿಕ್ಕ ದೊಡ್ಡ ಗೆಲುವೆಂದರೆ ಇಲ್ಲಿ ರಾಹುಲ್ ದ್ರಾವಿಡ್ ನುರಿತ ನಟನ ರೀತಿ ತೋರುತ್ತಾರೆ. ನಟನೆ ಕಲೆಗಿಂತ ಕ್ರಿಕೆಟ್ ಕೌಶಲ್ಯಕ್ಕೆ ಹೆಸರಾದವರು ಅವರು. ಈ ಜಾಹೀರಾತಿಗೆ ಸಿಕ್ಕಿರುವ ಪ್ರತಿಕ್ರಿಯೆ ಬಹಳ ಖುಷಿ ತಂದಿದೆ. ರಾಹುಲ್ ದ್ರಾವಿಡ್ ಅವರಲ್ಲಿ ನಿಜವಾಗಿಯೂ ಅಸ್ತಿತ್ವದಲ್ಲಿಲ್ಲದ ಭಯಾನಕ ರೂಪವನ್ನು ನಾವು ಅನಾವರಣಗೊಳಿಸಿದ್ದೇವೆಂದು ಅನಿಸುತ್ತಿದೆ” ಎಂದು ಅಯ್ಯಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.ಅಂದಹಾಗೆ, ಜಾಹೀರಾತು ಶೂಟಿಂಗ್ ವೇಳೆ ರಾಹುಲ್ ದ್ರಾವಿಡ್ ಅವರಿಗೆ ನಿಜವಾಗಿಯೂ ಕೋಪ ಭರಿಸುವ ಪ್ರಯತ್ನವನ್ನ ತಂಡದವರು ಮಾಡಿದ್ದರಂತೆ. ಒಂದೆಡೆ, ಕೃತಕವಾಗಿ ಟ್ರಾಫಿಕ್ ಜಾಮ್ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಮತ್ತೊಂದೆಡೆ ರಾಹುಲ್ ದ್ರಾವಿಡ್ ಅವರ ಮೇಲೆಯೇ ಮತ್ತೊಬ್ಬರಿಂದ ಏರಿದ ಧ್ವನಿಯಲ್ಲಿ ಕೂಗಾಡಿಸಲಾಗುತ್ತಿತ್ತು. ಇದರಿಂದ ರಾಹುಲ್ ದ್ರಾವಿಡ್ ಉದ್ರೇಕಗೊಂಡು ಕ್ಯಾಮೆರಾ ಮರೆತು ನಟಿಸಲು ಸುಲಭವಾಗಬಹುದು ಎಂಬ ಎಣಿಕೆ ಶೂಟಿಂಗ್ ತಂಡದ್ದಾಗಿತ್ತು. ಇವರೆಲ್ಲರ ಎಣಿಕೆ ಮೀರಿ ರಾಹುಲ್ ದ್ರಾವಿಡ್ ರೌದ್ರಾವತಾರವನ್ನು ತೋರ್ಪಡಿಸಿದ್ದರು.
“ಈ ಜಾಹೀರಾತು ಹೇಗೆ ಮೂಡಿ ಬರುತ್ತದೆ ಎಂದು ನಮಗೆ ಸ್ಪಷ್ಟತೆ ಇರಲಿಲ್ಲ. ಇದಾಗದಿದ್ದರೆ ಬೇರೆ ಬೇರೆ ರೀತಿಯ ದೈಹಿಕ ತಳ್ಳಾಟ ಇತ್ಯಾದಿ ಸನ್ನಿವೇಶಗಳನ್ನ ನಾವು ಬ್ಯಾಕಪ್ ಆಗಿ ಇಟ್ಟುಕೊಂಡಿದ್ದೆವು. ಒಂದು ದಿನ ದ್ರಾವಿಡ್ ಅವರನ್ನ ಭೇಟಿಯಾಗಿ ಈ ಜಾಹೀರಾತಿನ ಸನ್ನಿವೇಶದ ಕಲ್ಪನೆ ವಿವರಿಸಿದೆವು. ಅಚ್ಚರಿ ಎಂಬಂತೆ ಅವರು ವಿಚಲಿತರಾಗದೇ ಉತ್ಸಾಹಿತರಾದರು. ನಾನು ಅವರಿಗೆ ಜಾಹೀರಾತಿನ ಡೈಲಾಗ್ ಅನ್ನು ಹೊಡೆದು ತೋರಿಸಿದೆ. ಆಗ ಅವರಿಗೆ ಒಂದು ಸ್ಪಷ್ಟತೆ ಸಿಕ್ಕಿತು… ನಟನಲ್ಲದ ಒಬ್ಬ ವ್ಯಕ್ತಿ ಆ ರೀತಿ ಸ್ಫೋಟಗೊಳ್ಳುವುದು ಬಹಳ ಕಷ್ಟಸಾಧ್ಯ” ಎಂದು ಜಾಹೀರಾತು ನಿರ್ದೇಶಕರು ಶ್ಲಾಘಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರಿಗೆ ನಿಜವಾಗಿಯೂ ಕೋಪ ಭರಿಸುವ ನಮ್ಮ ಪ್ರಯತ್ನ ವಿಫಲವಾಗಿದ್ದು ಹೌದು. ಏನೇ ಉದ್ರೇಕಗೊಳಿಸಿದರೂ ಅವರಿಗೆ ಕೋಪ ಬರಲೇ ಇಲ್ಲ. ಆದರೆ, ಕೋಪ ಬಂದಂತೆ ಅದ್ಭುತವಾಗಿ ಅಭಿನಯಿಸಿದರು ಎಂದವರು ತಿಳಿಸಿದ್ದಾರೆ.
ಜಾಹೀರಾತಿನ ಸಾಲುಗಳನ್ನ ಬರೆದ ತನ್ಮಯ್ ಭಟ್ ಅವರು ದ್ರಾವಿಡ್ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ. “ನಾನು ಭೇಟಿ ಮಾಡಿದ ಅತ್ಯಂತ ಸಭ್ಯ ವ್ಯಕ್ತಿಗಳಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು… ನನ್ನ ಬ್ಯಾಟಿಂಗ್ ನಿಲುವನ್ನು ಸರಿಪಡಿಸುವ ಬಗೆ ತಿಳಿಸಿಕೊಟ್ಟರು. ಆದರೆ, ನನಗೆ ಅಚ್ಚರಿ ಮೂಡಿಸಿದ್ದು ನಮ್ಮ ಜಾಹೀರಾತಿನ ಹಿಂದಿನ ಕೆಲಸಗಳ ಬಗ್ಗೆ ಅವರಿಗಿದ್ದ ಕುತೂಹಲ. ಕಾಮಿಡಿ ಪಂಚ್ ಲೈನ್ಗಳು, ಡೈಲಾಗ್ ಡೆಲಿವರಿ, ಕಾಮಿಡಿ ದೃಶ್ಯಗಳನ್ನ ಬರೆದು ನಿರ್ದೇಶಿಸುವ ಹಿಂದಿನ ಸಂಗತಿ ಇತ್ಯಾದಿ ಬಗ್ಗೆ ಕೇಳಿ ತಿಳಿದುಕೊಂಡರು. ಅವರೊಂದಿಗೆ ಕಳೆದ ಕ್ಷಣಗಳು ಅತ್ಯಮೂಲ್ಯವಾದವು…” ಎಂದು ತನ್ಮಯ್ ಭಟ್ ವಿವರಿಸಿದ್ದಾರೆ.