ಉಳ್ಳಾಲ: ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಅಜ್ಜಿನಡ್ಕ ಉಚ್ಚಿಲ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ಅಜ್ಜಿನಡ್ಕ ನಿವಾಸಿ ಆರಿಫ್ (28) ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ಮಂಗಳೂರಿನ ಧಕ್ಕೆಗೆ ಕೆಲಸಕ್ಕೆಂದು ಬೈಕಿನಲ್ಲಿ ತೆರಳುವಾಗ ಮುಳ್ಳುಗುಡ್ಡೆ ಸಮೀಪ ಕಾರೊಂದರಲ್ಲಿ ಅವಿತು ಕುಳಿತಿದ್ದ ನಾಲ್ವರ ತಂಡ ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ.
ಘಟನೆ ವಿವರ: ಆರೀಫ್ ಸಹೋದರ ಕರೀಂ ಎಂಬವರು ನೌಫಾಲ್ ಮತ್ತು ತಂಡದಿಂದದ ೬೦ ,೦೦೦ ರೂ. ಹೆಚ್ಚುವರಿ ಬಡ್ಡಿ ನೀಡುವುದಾಗಿ ಪಡೆದುಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಹಣ ನೀಡದ ಹಿನ್ನೆಲೆ ನೌಫಾಲ್ ಮತ್ತು ತಂಡ ಕರೀಂ ಕೆಲಸ ನಡೆಸುವ ಮೀನುಗಾರಿಕೆಯ ಸಲಕರಣೆಗಳನ್ನು ಹೊತ್ತೊಯ್ದಿದ್ದರು. ಕರೀಂ ಅಸಲು ಹಣ ಪಾವತಿಸಿ ಸಾಮಗ್ರಿಗಳನ್ನು ವಾಪಸ್ಸು ಪಡೆದುಕೊಂಡಿದ್ದರು. ಆದರೆ ಪಡೆದ ಸಾಲದ ಬಡ್ಡಿ ಹಣ ರೂ.೭,೦೦೦ ನೀಡಿರಲಿಲ್ಲ. ಇದೇ ವಿಚಾರದಲ್ಲಿ ಆರೀಫ್ ಮತ್ತು ಕರೀಂ ಸಹೋದರರು ಹಾಗೂ ನೌಫಾಲ್ ತಂಡದ ನಡುವೆ ವಾಗ್ವಾದ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಇಂದು ನೌಫಾಲ್,ಸಾದಿಕ್ ಮತ್ತಿಬ್ಬರ ತಂಡ ಕೆಲಸಕ್ಕೆ ಹೋಗುತ್ತಿದ್ದ ಆರೀಫ್ ಮೇಲೆ ಕೊಲೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

