ಮಂಗಳೂರು: ಜರ್ಮನಿಯ ಬರ್ಲಿನ್ ನಲ್ಲಿ ಇದೇ 14 ರಿಂದ ಆರಂಭಗೊಂಡಿರುವ ಅಂತರರಾಷ್ಟ್ರೀಯ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ನಲ್ಲಿ ಮಂಗಳೂರಿನ ಸಾನಿಧ್ಯ ವಸತಿ ಶಾಲೆಯ ವಿದ್ಯಾರ್ಥಿ ಹರೀಶ್ ವಿ, ಪವರ್ ಲಿಫ್ಟಿಂಗ್ ನಲ್ಲಿ 4 ಚಿನ್ನದ ಪದಕ ಬಾಚಿಕೊಂಡಿದ್ದಾನೆ ಎಂದು ಸಾನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಶೆಟ್ಟಿ ತಿಳಿಸಿದ್ದಾರೆ.
83 ಕೆ.ಜಿ ವಿಭಾಗದಲ್ಲಿ ಹರೀಶ್ ಸ್ಕ್ವಾಟ್ 140 ಕೆಜಿ, ಡೆಡ್ ಲಿಫ್ಟ್ 170 ಕೆಜಿ, ಬೆಂಚ್ ಪ್ರೆಸ್ 85 ಕೆಜಿ ವಿಭಾಗದಲ್ಲಿ ಮೂರು ಚಿನ್ನ, ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಬಾಚಿಕೊಂಡಿರುವುದು ಸಾನಿಧ್ಯ ಕೀರ್ತಿ ಹೆಚ್ಚಿಸಿದೆ ಎಂದು ತಿಳಿಸಿದರು.ಸಾನಿಧ್ಯ ಶಾಲೆಯಲ್ಲಿರುವ ಹರೀಶ್ ಮೂಲತಃ ಬೆಂಗಳೂರಿನವರು. ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕರ್ನಾಟಕ ಪ್ರತಿನಿಧಿಸಿರುವ ಏಕೈಕ ಕ್ರೀಡಾಪಟು ಎಂಬುದೇ ಹೆಮ್ಮೆಯ ವಿಷಯ. ತರಬೇತುದಾರರಾಗಿ ಪ್ರೇಮನಾಥ ಉಳ್ಳಾಲ ಉತ್ತಮ ಕೌಶಲಗಳನ್ನು ಹೇಳಿಕೊಡುತ್ತಿದ್ದಾರೆ. ಸ್ಪರ್ಧೆಗಳು ಮುಂದುವರೆದಿದ್ದು, ಮತ್ತಷ್ಟು ಚಿನ್ನದ ಪದಕಗಳು ರಾಜ್ಯದ ಕ್ರೀಡಾಪಟು ಹರೀಶ್ ಗೆ ಸಿಗುವಂತೆ ಆಗಲಿ ಎಂದು ತಿಳಿಸಿದ್ದಾರೆ.
