ಬಂಟ್ವಾಳ: ನ್ಯಾಯವಾದಿ ಕುಲ್‌ದೀಪ್ ಶೆಟ್ಟಿಯವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಲೀಗಲ್ ಫೋರಂ ಹಾಗೂ ಜಿಲ್ಲೆಯ ನ್ಯಾಯವಾದಿಗಳು ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಿ ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಟ್ ಅವರಿಗೆ ಮನವಿ ನೀಡಿದರು.
ಈ ವೇಳೆ ಫೋರಂನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ ಏಕಾಏಕಿ ಮನೆಗೆ ಆಗಮಿಸಿದ ಪೊಲೀಸರು ವಕೀಲ ಕುಲದೀಪ್‌ಗೆ ಹಲ್ಲೆ ನಡೆಸಿ ಅಂಗಿ ಹರಿದು ಹಾಕಿ ಕುಟುಂಬದ ಸದಸ್ಯರು ಬೇಡಿಕೊಂಡರೂ ಲೆಕ್ಕಿಸದೆ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ಕಾನೂನಿನ ಜ್ಞಾನವಿಲ್ಲದ ಇಂತವರು ಪಿಎಸ್‌ಐ ಸ್ಕ್ಯಾಂಡಲ್ ಮೂಲಕ ನೇಮಕವಾಗಿ ಸಾಧ್ಯತೆ ಇದೆ. ಹೀಗಾಗಿ ಇವರನ್ನು ವಾರದೊಳಗೆ ಅಮಾನತು ಮಾಡುವಂತೆ ಆಗ್ರಹಿಸಿದರು.
ಪ್ರಕರಣವು ತನಿಖೆಯಲ್ಲಿದ್ದು ಅದರ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಡಿವೈಎಸ್‌ಪಿ ತಿಳಿಸಿದರು. ಎಸ್‌ಪಿ ಋಷಿಕೇಶ್ ಭಗವಾನ್ ಅವರು ತನಿಖೆಯ ಬಳಿಕ ಮುಂದಿನ ಕ್ರಮ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಫೋರಂನ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಉದನೇಶ್ವರ ಬಿ, ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ. ಸಿದ್ದಕಟ್ಟೆ, ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಶ್ ಪೂಜಾರಿ ಮೊದಲಾದವರಿದ್ದರು.