ನವದೆಹಲಿ: ಭಾರತದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗಿದ್ದು, 4ನೇ ಅಲೆ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ನಡೆಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಗೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ, ಅಲ್ಲಿ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಜೈನ್ ಬಸದಿಗೆ ಭೇಟಿ ಕೊಡಲಿದ್ದು, ಮಧ್ಯಾಹ್ನ 1ಗಂಟೆಗೆ ಮೂಡಿಬಿದರೆ ಪ್ರೆಸ್ ಕ್ಲಬ್ನಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಮೂಡಬಿದಿರೆ ತಾಲೂಕು ಆಡಳಿತಸೌಧ ಉದ್ಘಾಟನೆ ಹಾಗೂ ಮುಲ್ಕಿ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 5.30ಕ್ಕೆ ಮೂಡುಬಿದಿರೆಯಿಂದ ಹೊರಟು ರಾತ್ರಿ 7.45ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಈ ನಡುವೆ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದು, ಸಭೆಯಲ್ಲಿ ಬೊಮ್ಮಾಯಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ್ ಕೂಡ ಭಾಗಿಯಾಗಲಿದ್ದು, ಪರಿಸ್ಥಿತಿಯ ವಿವರಣೆ ನೀಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಸಭೆ ಕುರಿತು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿರುವುದರಿಂದ ಎಲ್ಲರು ಎಚ್ಚರದಿಂದಿರುವಂದೆ ತಿಳಿಸಿದ್ದಾರೆ.

