ಉಡುಪಿ : ನೇಪಾಳದಲ್ಲಿ ನಡೆದ ಇಂಡೊ – ನೇಪಾಲ್ ತ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಭಾರತ ಗೆಲುವಿನ ಸಾಧನೆ ಮಾಡಿದ್ದು, ತಂಡದಲ್ಲಿ ಉಡುಪಿ ಜಿಲ್ಲೆಯ ಮೂವರು ಆಟಗಾರ್ತಿಯರು ಇದ್ದರು ಎಂಬುದು ಹೆಮ್ಮೆಯ ವಿಷಯ. ನವಂಬರ್ 12 ಮತ್ತು 13 ಕ್ಕೆ ನೇಪಾಳದಲ್ಲಿ ಐದು ರಾಜ್ಯಗಳ ತ್ರೋಬಾಲ್ ಕ್ರೀಡಾಕೂಟ ನಡೆದಿತ್ತು. ಇಂಡೋ ನೇಪಾಳ ಚಾಂಪಿಯನ್ಶಿಪ್ ನಲ್ಲಿ ಭಾರತ ಶ್ರೀಲಂಕಾ ಬಾಂಗ್ಲಾದೇಶ ನೇಪಾಳ ಮತ್ತು ಮಲೇಶಿಯಾ ತಂಡಗಳು ಭಾಗವಹಿಸಿದ್ದವು. ಭಾರತ ಚಿನ್ನದ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದೆ. ಭಾರತದ ತಂಡದಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂವರು ಆಟಗಾರ್ತಿಯರು ಭಾರತ ದೇಶವನ್ನು ಪ್ರತಿನಿಧಿಸಿದ್ದು ಕರಾವಳಿಯ ಹೆಮ್ಮೆ. ಕಾಪು ತಾಲೂಕು ಶಿರ್ವದ ಶಮಿತಾ ಮತ್ತು ಧನ್ಯ, ಮುದರಂಗಡಿಯ ರಶ್ಮೀ ಥ್ರೋ ಬಾಲ್ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡ ಹೆಮ್ಮೆಯ ಆಟಗಾರ್ತಿಯರು. ಇವರಲ್ಲಿ ಶಮಿತಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ನೇರವಾಗಿ ಆಯ್ಕೆಯಾದರು.
