ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ವ್ಯಕ್ತಿಯೋರ್ವ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಮಾಯಾ ಅತ್ರಿಜಾಲು ಮನೆಯ ತಮ್ಮಯ ಗೌಡ (46) ಕೆರೆಗೆ ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಜು. 12 ಸಂಜೆಯಿಂದ ಕಾಣೆಯಾಗಿದ್ದ ತಮ್ಮಯ ಗೌಡರನ್ನು ಮನೆಯವರು ಹುಡುಕಿದ್ದು ಆದರೂ ಸಿಗದೆ ಇದ್ದಾಗ ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಹರೀಶ ಕೂಡಿಗೆಯವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸೇವಾಪ್ರತಿನಿಧಿ ಆಶಾರವರ ನೇತೃತ್ವದಲ್ಲಿ ಯಶೋಧರ ಮಂಡಾಲು, ಸುಲೈಮಾನ್ ಬೆಳಾಲು, ಸಂತೋಷ ಕನೆಕ್ಕಿಲ ಹಾಗೂ ಊರಿನವರೊಂದಿಗೆ ಸೇರಿಕೊಂಡು ಹುಡುಕಾಡುವಾಗ ಸಮೀಪದ ಕೆರೆಯ ಬಳಿ ಒಂದು ಟಾರ್ಚ್ ಲೈಟ್ ಕಾಣಸಿಕ್ಕಿತ್ತು.
ಕೆರೆಗೆ ಬಿದ್ದಿರುವ ಸಂಶಯದಿಂದ ಆಳವಾದ ಕೆರೆಯಲ್ಲಿ ಹುಡುಕುವ ಪ್ರಯತ್ನ ಮಾಡಲಾಯಿತು.
ಕೂಡಿಗೆ ಹರೀಶರವರು ದೋಟಿಯ ಸಹಾಯದಿಂದ 2 ನೇ ಬಾರಿ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ನೀರಿನಿಂದ ಮೇಲೆ ಬಂತು.
ಬಳಿಕ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ, ಎ ಎಸ್ ಐ ಬಾಲಕೃಷ್ಣರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಶಿಧರ್ ಮತ್ತು ಅಭಿಜಿತ್‌ರವರು ಸ್ಥಳಕ್ಕೆ ಬಂದು ಪರೀಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.