ಉಡುಪಿ: ಸಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶನದಂತೆ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾಸುರಕ್ಷಾ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಸಿಕ ಪಿಂಚಣಿ ವಿತರಣೆಯನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ವ್ಯವಸ್ಥೆಯಡಿ ಫಲಾನುಭವಿಗಳ ಬ್ಯಾಂಕ್/ಅಂಚೆ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲಾ ಪಿಂಚಣಿದಾರರು ಪಿಂಚಣಿ ಪಾವತಿ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದರು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ಮ್ಯಾಪಿಂಗ್ ಮಾಡಿಸಿಕೊಳ್ಳದಿದ್ದರೆ ಮುಂದಿನ ನವೆಂಬರ್ ತಿಂಗಳನಿಂದ ಅವರ ಖಾತೆಗೆ ಪಿಂಚಣಿ ದುಡ್ಡು ಜಮೆಯಾಗುವುದಿಲ್ಲ.ಪಿಂಚಣಿ ಪಾವತಿ ಸ್ಥಗಿತಗೊಳ್ಳುವುದು. ಹೀಗಾಗಿ ಎಲ್ಲಾ ಫಲಾನುಭವಿ ಪಿಂಚಣಿದಾರರು ಆಧಾರ್ ಜೋಡಣೆ, ಮ್ಯಾಪಿಂಗ್ ಮಾಡುವಂತೆ ಡಾ.ವಿದ್ಯಾಕುಮಾರಿ ಮನವಿ ಮಾಡಿದರು. ಎನ್‌ಪಿಸಿಐ ಮ್ಯಾಪಿಂಗ್ ಎಂದರೆ ಬ್ಯಾಂಕ್/ಅಂಚೆ ಉಳಿತಾಯ ಖಾತೆಯನ್ನು ಆಧಾರ್ ಸಂಖ್ಯೆಗಳೊಂದಿಗೆ ಸಂಯೋಜಿಸುವ ಪ್ರಕ್ರಿಯೆ. ಈ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಈವರೆಗೆ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆ ಮಾಡಿಕೊಳ್ಳದಿದ್ದಲ್ಲಿ ಅ.25ರೊಳಗೆ ಪಿಂಚಣಿ ಪಡೆಯಲು ಬ್ಯಾಂಕ್/ಅಂಚೆ ಖಾತೆ ಹೊಂದಿರುವ ಬ್ಯಾಂಕ್/ಅಂಚೆ ಕಚೇರಿಯನ್ನು ಸಂಪರ್ಕಿಸಿ ತಕ್ಷಣವೇ ಇಕೆವೈಸಿ (ಆಧಾರ್ ಜೋಡಣೆ) ಪ್ರಕ್ರಿಯೆ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಕೊಳ್ಳವಂತೆ ಹಾಗೂ ಅವು ಆಗಿರುವ ಕುರಿತು ದೃಢೀಕರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
©2021 Tulunada Surya | Developed by CuriousLabs