ಉಡುಪಿ : ತುಲಾಭಾರ ನಡೆಯುವ ವೇಳೆ ತಕ್ಕಡಿ ಕುಸಿದು ಬಿದ್ದು ಪೇಜಾವರ ಶ್ರೀಗಳು ಗಾಯಗೊಂಡ ಘಟನೆ ಸಂಭವಿಸಿದೆ. ದೆಹಲಿಯಲ್ಲಿ ಭಕ್ತರು ತುಲಾಭಾರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಈ ಅವಘಡ ಸಂಭವಿಸಿದ್ದು ಪೇಜಾವರ ಸ್ವಾಮೀಜಿ ಸುರಕ್ಷಿತವಾಗಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವ ದೆಹಲಿಯಲ್ಲಿ ಅದ್ಧೂರಿ ಕಾರ್ಯಕ್ರಮಗಳು ಏರ್ಪಾಟಾಗಿವೆ. ಒಟ್ಟು ಐದು ದಿನಗಳ ಕಾರ್ಯಕ್ರಮದಲ್ಲಿ ನಾನಾ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ರು. ಬುಧವಾರ, ಶಿಷ್ಯರೆಲ್ಲಾ ಸೇರಿ ಪೇಜಾವರ ಶ್ರೀಗಳಿಗೆ ತುಲಾಭಾರ ಏರ್ಪಡಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತಕ್ಕಡಿ ಕುಸಿದು, ತಕ್ಕಡಿಯ ಮೇಲ್ಭಾಗ ಶ್ರೀಗಳ ತಲೆಯ ಮೇಲೆ ಉರುಳಿದೆ. ಆತಂಕಗೊಂಡ ಭಕ್ತರು ಸುತ್ತುವರೆಯುತ್ತಿದ್ದಂತೆ, ಕೈ ಸನ್ನೆಯ ಮೂಲಕ ಸ್ವಾಮೀಜಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ತಕ್ಕಡಿ ಕುಸಿದು ಬಿದ್ದ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತದೆ. ನಯೋಲಿನ್ ಹಗ್ಗದ ಮೂಲಕ ತಕ್ಕಡಿಯನ್ನು ಕಟ್ಟಿರುವುದರಿಂದ ಶಿಥಿಲಗೊಂಡ ಹಗ್ಗ ತುಂಡಾಗಿ ಬಿದ್ದಿರುವ ಸಾಧ್ಯತೆ ಇದೆ. ಭೂಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿ ತಕ್ಕಡಿ ಇದ್ದ ಕಾರಣ ಪೇಜಾವರ ಶ್ರೀಗಳಿಗೆ ಕುಸಿದು ಬಿದ್ದು ಯಾವುದೇ ಅಡ್ಡಿಯಾಗಿಲ್ಲ. ಆದರೆ ತಲೆಯ ಭಾಗಕ್ಕೆ ಸಣ್ಣಪುಟ್ಟ ತರಚು ಗಾಯವಾಗಿದೆ. ಘಟನೆ ನಡೆದು ಎರಡು ದಿನಗಳ ಬಳಿಕ ಸ್ಪಷ್ಟನೆ ಕೊಟ್ಟ ಶ್ರೀ ವಿಶ್ವ ಪ್ರಸನ್ನ ತೀರ್ಥರು ನಾನು ಆರೋಗ್ಯವಾಗಿದ್ದೇನೆ.ಯಾರೂ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
©2021 Tulunada Surya | Developed by CuriousLabs