ಬೆಂಗಳೂರು : ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ನ ಒಮಿಕ್ರೋನ್ ತಳಿಯ ಹೊಸ ರೂಪಾಂತರಿ ಬಿಕ್ಯು.1 ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮಾಸ್ಕ್ ಧಾರಣೆ, ಗುಂಪು ಸೇರುವಿಕೆಯಿಂದ ದೂರ ಇರುವುದು ಹಾಗೂ ಮೂರನೇ ಡೋಸ್ ಲಸಿಕೆ ಪಡೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ, ಕೋವಿಡ್-19ರ ಬಿಎ.2.75 ಹಾಗೂ ಬಿಜೆ.1ನ ಓಮಿಕ್ರಾನ್ ಹೊಸ ಉಪ ರೂಪಾಂತರ ತಳಿ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ದೀಪಾವಳಿ ಹಬ್ಬ ಹಾಗೂ ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗಸೂಚಿ ಕ್ರಮಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ಉಪ ರೂಪಾಂತರಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರ್ವಜನಕಿರು ಗುಂಪು ಸೇರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ, ಈ ಕೆಳಕಂಡ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.
ಏನಿದೆ ಮಾರ್ಗಸೂಚಿಯಲ್ಲಿ..?
• ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆಗೆ ಒಳಗಾಗುವಂತೆ ತಿಳಿಸಿದೆ.
• ಕೋವಿಡ್ ಪರೀಕ್ಷೆಗೆ ಒಳಗಾದವರು ಕಡ್ಡಾಯವಾಗಿ ಪ್ರತ್ಯೇಕವಾಗಿ ಮನೆಯಲ್ಲಿ ಸ್ವಯಂ ಪ್ರೇರಿತವಾಗಿ ಇರುವಂತೆ ಸೂಚಿಸಿದೆ.
• ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಶೀಘ್ರವಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ, ವೈದ್ಯಕೀಯ ಆರೈಕೆಯನ್ನು ಪಡೆಯುವಂತೆ ತಿಳಿಸಿದೆ.
• ಏರ್ ಕಂಡೀಷನ್ ವ್ಯವಸ್ಥೆ ಇರುವ ಒಳಾಂಗಣಗಳು, ಅಗತ್ಯ ಗಾಳಿ ಬೆಳಕಿಲ್ಲದಿರುವ ಸ್ಥಳಗಳು, ಮುಚ್ಚಿದ ಸಂರಕ್ಷಣೆಯ ಜನಸಂದಣಿಯ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.
• ಹಬ್ಬಗಳನ್ನು ಸಾಧ್ಯವಾದಷ್ಟು ಹೊರಾಂಗಣದಲ್ಲಿ ಆಚರಿಸುವುದು. ಜನ ದಟ್ಟಣೆಯ ಪ್ರದೇಶಗಳಿಂದ ದೂರವಿರುವಂತೆ ತಿಳಿಸಿದೆ.
• ಕೋವಿಡ್19 ಲಸಿಕೆಯ ಬೂಸ್ಟರ್, ಮುಂಜಾಗ್ರತಾ ಡೋಸ್ ಲಸಿಕೆ ಬಾಕಿ ಇರುವವರು ಕೂಡಲೇ ಬಡೆಯುವಂತೆ ತಿಳಿಸಿದೆ.
• ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸುವಂತೆ ಸೂಚಿಸಿದೆ.
• ಸಾರ್ವಜನಿಕ ಸ್ಥಳಗಳಲ್ಲಿ ಮೂಗನ್ನು ಶುಚಿಗೊಳಿಸದಿರುವುದು ಹಾಗೂ ಉಗುಳುವುದಿರುವುದು, ಕೈಗಳನ್ನು ಸೋಪ್ ಹಾಗೂ ನೀರಿನಿಂದ ತೊಳೆಯವುದು.
• ಸೋಂಕಿನ ಲಕ್ಷಣಗಳನ್ನು ಹೊಂದಿದವರ ಸಂಪರ್ಕದಿಂದ ದೂರವಿರುವಂತೆ ತಿಳಿಸಿದೆ.