ನವದೆಹಲಿ: ಸುಪ್ರೀಂಕೋರ್ಟ್ 48ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಿದರು.
ನ್ಯಾ. ಎನ್.ವಿ. ರಮಣ ಅವರನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ನೇಮಕಾತಿಗೆ ಸಂಬಂಧ ಏಪ್ರಿಲ್ 6ರಂದು ನ್ಯಾಯಾಂಗ ಇಲಾಖೆ, ಕಾನೂನು ಸಚಿವಾಲಯ ಅಧಿಸೂಚನೆ ಪ್ರಕಟಿಸಿತು. ಈ ಹಿಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಶರದ್ ಅರವಿಂದ್ ಬೊಬ್ದೆ ಅವರು ನ್ಯಾ. ಎನ್.ವಿ.ರಮಣ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು.
ನ್ಯಾಯಮೂರ್ತಿ ರಮಣ ಮೊದಲ ತಲೆಮಾರಿನ ವಕೀಲರಾಗಿದ್ದು, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನವರಂ ಗ್ರಾಮದವರು. 22 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ನ್ಯಾ.ಎಸ್.ಎ. ಬೊಬ್ಡೆ ಅವರು ಶುಕ್ರವಾರ ಸಿಜೆಐ ಸ್ಥಾನದಿಂದ ನಿವೃತ್ತರಾದರು. ಸಿಜೆಐ ಸ್ಥಾನದಿಂದ ನಿರ್ಗಮಿಸಿದ ಬಳಿಕ ಅವರು ಸುಪ್ರೀಂಕೋರ್ಟ್ ಅನ್ನು ಸಂತೋಷ, ಸದ್ಭಾವನೆ ಮತ್ತು ಬಹಳ ಪ್ರೀತಿಯ ನೆನಪುಗಳೊಂದಿಗೆ ಹಾಗೂ ಇರುವಷ್ಟು ಕಾಲ ಅತ್ಯುತ್ತಮ ಕಾರ್ಯ ಮಾಡಿದ ತೃಪ್ತಿಯೊಂದಿಗೆ ನಿರ್ಗಮಿಸುತ್ತಿರುವುದಾಗಿ ಹೇಳಿದರು.ನ್ಯಾ. ಎಸ್.ಎ. ಬೊಬ್ಡೆ ಅವರು ನ್ಯಾ. ಎನ್.ವಿ. ರಮಣ ಅವರೊಂದಿಗೆ ಹಲವಾರು ಪ್ರಕರಣಗಳಲ್ಲಿ ನ್ಯಾಯಪೀಠ ಹಂಚಿಕೊಂಡಿದ್ದಾರೆ. ಐತಿಹಾಸಿಕ ಅಯೋಧ್ಯೆ ತೀರ್ಪು ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳನ್ನು ನಿರ್ಧರಿಸಿದ ನ್ಯಾಯಮೂರ್ತಿ ಬೊಬ್ಡೆ ಅವರು 2019 ರ ನವೆಂಬರ್ನಲ್ಲಿ 47ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದರು.ನ್ಯಾ. ಶರದ್ ಅರವಿಂದ್ ಬೋಬ್ಡೆ ಬಳಿಕ ನ್ಯಾ| ಎನ್ ವಿ ರಮಣ ಅವರೇ ಸುಪ್ರೀಂ ಕೋರ್ಟ್ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ನ್ಯಾ| ರಮಣ ಅವರ ಸೇವಾವಧಿ 2022, ಆಗಸ್ಟ್ 26ರವರೆಗೂ ಇದೆ. 1957, ಆಗಸ್ಟ್ 27ರಂದು ಜನಿಸಿದ ನ್ಯಾ| ರಮಣ ಅವರು 2000ರ ಜೂನ್ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಅದಾದ ಬಳಿಕ ಅವರ ಅವರು ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನಂತರ 2014, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರನ್ನ ನೇಮಕ ಮಾಡಲಾಯಿತು.