ಯುವ ಉದ್ಯಮಿ, ಸುಳ್ಯ ತಾಲೂಕಿನ ಬೆಳ್ಳಾರೆಯ ನವೀನ್ ಕಾಮಧೇನು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಬಲಾತ್ಕಾರವಾಗಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ತಂದೆ ಎಂ.ಮಾಧವ ಗೌಡ, ಅತ್ತೆ ದಿವ್ಯಪ್ರಭ ಚಿಲ್ತಡ್ಕ ಸೇರಿದಂತೆ 6 ಮಂದಿಯ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.ನವೀನ್ ಅವರ ತಾಯಿ ನೀರಜಾಕ್ಷಿಯವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ” ಮಗ ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಳ ಮಧ್ಯೆ ಸುಮಾರು 3 ತಿಂಗಳಿಂದ ವೈಮನಸ್ಸು ಉಂಟಾಗಿ ಸ್ಪಂದನಾ ತವರು ಮನೆಗೆ ಹೋಗಿದ್ದಳು. ಡಿ.18 ರಂದು ಸ್ಪಂದನ ಹಾಗೂ ಆಕೆಯ ಹೆತ್ತವರಾದ ಪರಶುರಾಮ ಚಿಲ್ತಡ್ಕ, ದಿವ್ಯಪ್ರಭಾ ಚಿಲ್ತಡ್ಕ, ತಮ್ಮ ಸ್ಪರ್ಶಿತ್ ಹಾಗೂ ಸಂಬಂಧಿಕರು ಬಂದು ಮಾತುಕತೆ ಮಾಡಿದ್ದು ಆ ವೇಳೆ ನವೀನ್ ಕುಮಾರ್ ಪತ್ನಿ ಸ್ಪಂದನ ನನಗೆ ಬೇಡ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದ.
ಇದೇ ಕಾರಣದಿಂದ ಡಿ.19 ರಂದು ಪತಿ ಮಾಧವ ಗೌಡ, ಸೊಸೆ ಸ್ಪಂದನ, ಸೊಸೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ಆಕೆಯ ತಂದೆ ಪರಶುರಾಮ, ತಮ್ಮ ಸ್ಪರ್ಶಿತ್, ನವೀನ್ ರೈ ತಂಬಿನಮಕ್ಕಿ ಎಂಬವರು ನವೀನ್ ನನ್ನು ಅಪಹರಿಸುವ ಉದ್ದೇಶದಿಂದ ಒಟ್ಟು ಸೇರಿ ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ಮನೆ ಬಳಿ ಕೈ ಕಾಲು ಕಟ್ಟಿ ಅಂಬ್ಯುಲೆನ್ಸ್ ವಾಹನದಲ್ಲಿ ಅಪಹರಿಸಿಕೊಂಡು ಹೋಗಿದ್ದು ಆ ವೇಳೆ ತಡೆಯಲು ಹೋದ ನಮ್ಮನ್ನು ಹೊಡೆದು,ಕಾಲಿನಿಂದ ತುಳಿದು ನೋವು ಉಂಟು ಮಾಡಿದ್ದು ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೇವೆ ” ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ಪೋಲೀಸರು ಮಾಧವ ಗೌಡ, ದಿವ್ಯಪ್ರಭಾ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ , ನವೀನ್ ರೈ ತಂಬಿನಮಕ್ಕಿ ಎಂಬವರ ಮೇಲೆ ಕೇಸು ದಾಖಲಿಸಿದ್ದಾರೆ.