ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಕಾರ್ಯಕ್ರಮದನ್ವಯ ದ.ಕ.ಜಿಲ್ಲೆಯಾದ್ಯಂತ ಎಲ್ಲಾ ಮನೆಗಳ ಮೇಲೆಯೂ ಆಗಸ್ಟ್ 13 ರಿಂದ 15ರವರೆಗೆ ರಾಷ್ಟ್ರಧ್ವಜ ಹಾರಾಟವಾಗಲಿ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪ್ರೇಮ ಜಾಗೃತಗೊಳಿಸಲು ಅನುಕೂಲವಾಗುವಂತೆ ದ.ಕ.ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಪಂ ಸಿಇಒ, ಪಿಡಿಒಗಳು ಪೂರಕವಾದ ಕ್ರಮಗಳನ್ನು ಕೈಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.
ರಾಷ್ಟ್ರಧ್ವಜ ಹಾರಾಟಕ್ಕೆ ಅನುಕೂಲವಾಗುವಂತೆ ಧ್ವಜಗಳನ್ನು ಸರಬರಾಜು ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ. ಮುಖ್ಯವಾಗಿ ಎನ್.ಆರ್.ಎಲ್.ಎಂ. ಮೂಲಕ ಸ್ವಸಹಾಯ ಸಂಘಗಳ ಸದಸ್ಯರಿಗೆ ಧ್ವಜ ಸಿದ್ಧಪಡಿಸಿ ನೀಡುವಂತೆ ಆದೇಶಿಸಲಾಗಿದೆ. ಅದರಂತೆ ಅವರು ಧ್ವಜ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕವೂ ಧ್ವಜಗಳ ಸರಬರಾಜಾಗುತ್ತಿದ್ದು, ಅವುಗಳನ್ನು ವಿತರಿಸಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಸಭೆ ನಡೆಸುವಂತೆ ತಿಳಿಸಿದರು.
ಆ.13-15ರವರೆಗೆ ಎಲ್ಲಾ ಸರಕಾರಿ, ಸರಕಾರೇತರ ಕಚೇರಿಗಳು, ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಾಡಬೇಕು. ಅದೇ ರೀತಿ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣ, ವಿದ್ಯಾರ್ಥಿ ನಿಲಯಗಳು, ವಾಣಿಜ್ಯ ಸಂಕಿರ್ಣಗಳ ಮೇಲೂ ಧ್ವಜ ಹಾರಾಟವಾಗಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ಇದು ತಿಳಿಯಬೇಕು. ಪ್ರಭಾತ್ ಪೇರಿಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.