ಕಡಬ: “ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರ್ಕಾರಿ ಹಿ. ಪ್ರಾ. ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ನಮಾಝ್ ಮಾಡಿದ ಘಟನೆ ಮುಂದಿನ ದಿನಗಳಲ್ಲಿ ಮರಕಳಿಸುವುದಿಲ್ಲ. ಕಾನೂನಿನಂತೆ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಸೀಮಿತ ಮಾಡಿಕೊಳ್ಳುವ ಶಾಲಾಭಿವೃದ್ಧಿ ಸಮಿತಿ ನಿರ್ಣಯಕ್ಕೆ ಎಲ್ಲ ಪೋಷಕರು ಬದ್ಧರಾಗಿದ್ದಾರೆ” ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ತಿಳಿಸಿದ್ದಾರೆ.
ಶನಿವಾರ ಅಧಿಕಾರಿಗಳ, ಎಸ್ ಡಿಎಂಸಿ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಲೆಯಲ್ಲಿ ಗೊಂದಲದ ವಾತಾವರಣ ಉಂಟುಮಾಡುವ ಯಾವುದೇ ಘಟನೆ ಮತ್ತೆ ನಡೆಯಬಾರದು ಎನ್ನುವ ಅಭಿಪ್ರಾಯಕ್ಕೆ ಎಸ್ ಡಿಎಂಸಿ ಎಲ್ಲ ಪದಾಧಿಕಾರಿಗಳು ಒಮ್ಮತ ಸೂಚಿಸಿದ್ದಾರೆ ಎಂದರು.
ಸಭೆಗೆ ಎಸ್ ಡಿಎಂಸಿ ಪದಾಧಿಕಾರಿಗಳು, ನಿಕಟಪೂರ್ವ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮಾಧ್ಯಮದ ಮಂದಿಗೆ ಅವಕಾಶ ನಿರಾಕರಿಸಲಾಗಿತ್ತು. ಸಭೆಯಲ್ಲಿ ನಡೆಯುವ ಚರ್ಚೆಯ ಗೌಪ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಭಾಗವಹಿಸುವ ಮಂದಿ ಮೊಬೈಲ್ ಬಳಕೆ ಮಾಡದಂತೆ ಸೂಚಿಸಲಾಗಿತ್ತು.
ಶಾಲಾ ಆವರಣದೊಳಗೆ ಸಾರ್ವಜನಿಕರಿಗೆ ಓಡಾಟ ನಿಷೇಧಿಸಲಾಗಿತ್ತು. ಹೊರಗಡೆ ಪೋಷಕರು ಜಮಾಯಿಸಿದ್ದರು. ಬೆಳ್ಳಾರೆ ಪೊಲೀಸರು ರಕ್ಷಣೆ ಒದಗಿಸಿದರು. ಸೌಹಾರ್ದ ವಾತಾವರಣ ನಿರ್ಮಿಸಲು ಬದ್ಧ ಎನ್ನುವ ಎಸ್ ಡಿಎಂಸಿ ನಿರ್ಣಯದಿಂದ ಗೊಂದಲ ನಿವಾರಣೆಯಾಗಿದೆ.