ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಕೊನೆಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ ನಂತರ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಲಾಗಿದೆ. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುರುಘಾ ಶ್ರೀಗಳಿಗೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿದೆ. ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿದೆ. ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೆ ಮಾತ್ರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ