ಮುಲ್ಕಿ: ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶಪಡಿಸುವ ಕಾರ್ಯಕ್ರಮ ಮುಲ್ಕಿಯ ರಾಮ್ ಕೀ ಬಯೋಮೆಡಿಕಲ್ ವೇಸ್ಟ್ ಟ್ರೀಟ್ಮೆಂಟ್ ಕಂಪನಿಯಲ್ಲಿ ನಡೆಯಿತು.
ಈ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಮುಲ್ಕಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಕಾರ್ಯಕ್ರಮ ಮುಗಿದ ಬಳಿಕ ಪೊಲೀಸ್ ಕಮಿಷನರ್ ಮತ್ತು ಮಾಧ್ಯಮ ಮಿತ್ರರಿಗೆ ಚಹಾ ಹಾಗೂ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.
ತಿಂಡಿಯ ವ್ಯವಸ್ಥೆಯಲ್ಲಿ ಚಪಾತಿ ಹಾಗೂ ಬಿಸಿಬಿಸಿ ಮೈಸೂರುಪಾಕ್ ಕಮಿಷನರ್ ರವರ ಗಮನ ಸೆಳೆಯಿತು.
ಮಳೆಗಾಲದಲ್ಲಿ ಬಿಸಿ ಬಿಸಿ ಮೈಸೂರ್ ಪಾಕ್ ಸವಿದ ಕಮಿಷನರ್ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ನಗುತ್ತಲೇ ಎಲ್ಲಿಂದ? ಎಂದು ಕೇಳಿದಾಗ ಹಳೆಯಂಗಡಿ ಸಮೀಪದ ಪಾವಂಜೆ ಜ್ಞಾನಶಕ್ತಿ ದೇವಸ್ಥಾನದಿಂದ ಎಂಬ ಉತ್ತರ ಬಂತು. ಕಳೆದ ಕೊರೊನ ಲಾಕ್ಡೌನ್ ದಿನಗಳಲ್ಲಿ ಮುಲ್ಕಿ ಬಪ್ಪನಾಡು ಚೆಕ್ಪೋಸ್ಟ್ ಹಾಗೂ ಮತ್ತಿತರ ಕಡೆಗಳಲ್ಲಿ ಸರಕಾರಿ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಪಾವಂಜೆ ದೇವಸ್ಥಾನದಿಂದಲೇ ಪ್ರತಿ ಮಧ್ಯಾಹ್ನ ಊಟದ ವ್ಯವಸ್ಥೆ , ಬೆಳಿಗ್ಗೆ ಮತ್ತು ಸಂಜೆ ತಿಂಡಿಯ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಮಾಧ್ಯಮದ ಮಿತ್ರರು ಈ ಸಂದರ್ಭದಲ್ಲಿ ಕಮಿಷನರ್ ಗೆ ಹೇಳಿದರು. ಪೊಲೀಸ್ ಕಮಿಷನರ್ ಶಶಿಕುಮಾರ್ ಪಾವಂಜೆ ಶ್ರೀ ಜ್ಞಾನಶಕ್ತಿ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೇವಸ್ಥಾನಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದರು.
©2021 Tulunada Surya | Developed by CuriousLabs