Friday, March 29, 2024
spot_img
More

    Latest Posts

    ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಬಾರಿ ಮಡೆ ಸ್ನಾನಕ್ಕೆ ನಿರ್ಬಂಧ..!

    ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್‌21 ರಿಂದ ಚಂಪಾ ಷಷ್ಠಿ ಉತ್ಸವ ನಡೆಯಲಿದ್ದು, ಆ ಸಂದರ್ಭದಲ್ಲಿ ಎಡೆ ಸ್ನಾನಕ್ಕೆ ಮಾತ್ರ ಅವಕಾಶವಿರುತ್ತದೆ. ಷಷ್ಠಿಗೆ ಪೂರ್ವಭಾವಿಯಾಗಿ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್‌. ಅಂಗಾರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

    ನವೆಂಬರ್ 21ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಹೊತ್ತಿನಲ್ಲಿ ಹಿಂದೆ ಮಡೆ ಸ್ನಾನಕ್ಕೆ ಅವಕಾಶವಿತ್ತು. ಆದರೆ, ಸುಪ್ರೀಂಕೋರ್ಟ್‌ ಮಡೆ ಸ್ನಾನಕ್ಕೆ ನಿರ್ಬಂಧ ವಿಧಿಸಿದ್ದರಿಂದ ಅದನ್ನು ಎಡೆ ಸ್ನಾನವಾಗಿ ಬದಲಾಯಿಸಲಾಯಿತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಎಡೆಸ್ನಾನವೂ ಇರಲಿಲ್ಲ. ಈ ಬಾರಿ ಪರಿಸ್ಥಿತಿ ಸುಧಾರಿಸಿರುವುದರಿಂದ ಈ ಬಾರಿ ಎಡೆಸ್ನಾನಕ್ಕೆ ಅವಕಾಶ ನೀಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ತೀರ್ಮಾನಿಸಿದೆ.

    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿಂದಿನಿಂದಲೂ ಮಡೆ ಸ್ನಾನ ಪದ್ಧತಿ ಜಾರಿಯಲ್ಲಿತ್ತು. ಮಡೆ ಸ್ನಾನ ಎಂದರೆ ಬ್ರಾಹ್ಮಣರು ಪಂಕ್ತಿ ಭೋಜನ ನಡೆಸಿದ ಎಂಜಲು ಎಲೆಗಳ ಮೇಲೆ ಉರುಳುವ ಸೇವೆ. ಇದಕ್ಕೆ ಕೆಲವು ವರ್ಷದ ಹಿಂದೆ ಸುಪ್ರೀಂಕೋರ್ಟ್‌ ನಿರ್ಬಂಧ ವಿಧಿಸಿತ್ತು.
    ಇದಾದ ಬಳಿಕ ಭಕ್ತರ ಆಗ್ರಹದ ಮೇರೆಗೆ ಎಡೆ ಸ್ನಾನಕ್ಕೆ ಅವಕಾಶ ನೀಡಲಾಯಿತು. ಎಡೆ ಸ್ನಾನ ಎಂದರೆ ಒಂದಷ್ಟು ಎಲೆಗಳನ್ನು ಸಾಲಾಗಿ ಇಟ್ಟು ಅವುಗಳಿಗೆ ಎಲ್ಲ ರೀತಿಯ ಅನ್ನಾಹಾರ, ಭಕ್ಷ್ಯ ಭೋಜ್ಯಗಳನ್ನು ಹಾಕುವುದು. ಮೊದಲು ಅವುಗಳನ್ನು ಗೋವುಗಳಿಗೆ ತಿನ್ನಿಸುವುದು ಮತ್ತು ಆಮೇಲೆ ಉಳಿದ ಎಲೆಗಳ ಮೇಲೆ ಭಕ್ತರಿಗೆ ಉರುಳು ಸೇವೆ ನಡೆಸಲು ಅವಕಾಶ ನೀಡುವುದು.

    ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಆಗಮಶಾಸ್ತ್ರ ಪಂಡಿತರ ಉಪಸ್ಥಿತಿಯಲ್ಲಿ ಎಡೆಸ್ನಾನ ನಡೆಯುತ್ತದೆ ಎಂದು ತಿಳಿದುಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss