ಮಂಗಳೂರು : ಲೈಪ್ ಪಬ್ಲಿಷಿಂಗ್ ಮಂಗಳೂರು , ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಹಾಗೂ msf ಕರ್ನಾಟಕ ಇದರ ಸಹಕಾರದೊಂದಿಗೆ ದಿನಾಂಕ: 18 – 08 -2024 ರಂದು ಆದಿತ್ಯವಾರ ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮತ್ತು ಸ್ವರ್ಣ ಪದಕಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮ ಒಂದನ್ನು ಏರ್ಪಡಿಸಲಾಗಿದೆ. ಅದೇ ಸಂದರ್ಭದಲ್ಲಿ ಜಿಲ್ಲೆಯಿಂದ 100% ಪಲಿತಾಂಶ ದಾಖಲಿಸಿದ ಶಾಲಾ-ಕಾಲೇಜುಗಳಿಗೆ ಪುರಸ್ಕಾರವನ್ನು ನೀಡಲಾಗುವುದು.
ಜಿಲ್ಲೆಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಾಮಾನ್ಯ ,ಎಸ್ಸಿ,ಎಸ್ಟಿ ಮತ್ತು ಮುಸ್ಲಿಂ ವಿಭಾಗದ ಓರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸ್ವರ್ಣ ಪದಕ ನೀಡಲಾಗುವುದು.ಜಿಲ್ಲೆಯಿಂದ 90 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಎಲ್ಲಾ ಮುಸ್ಲಿಂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.ಮುಸ್ಲಿಂ ಸಮುದಾಯ ಹಾಗೂ ತಳ ಸಮುದಾಯಗಳಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಜಾಗೃತಿಗಾಗಿ ಅವರ ಉನ್ನತ ಶಿಕ್ಷಣದ ಮಾರ್ಗದರ್ಶನಕ್ಕಾಗಿ ಸ್ಥಾಪಿತವಾದ ಸಂಘಟನೆಗಳ ವತಿಯಿಂದ ಅರಿವಿನ ಕಿರಣ ಎಂಬ ಹೆಸರಿನಲ್ಲಿ ಜರುಗುವ ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಅರಿವಿನ ಕಿರಣ ವಿದ್ಯಾಲಯಗಳತ್ತ ಪಯಣ ಎಂಬ ಶೀರ್ಷಿಕೆಯಲ್ಲಿ ಜಿಲ್ಲೆಯ ಸರಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ವಸತಿ ನಿಲಯಗಳಿಗೆ ಭೇಟಿ ನೀಡಿ ಅವುಗಳ ಕುಂದು ಕೊರತೆಗಳ ಬಗ್ಗೆ ಅಧ್ಯಯನ ನಡೆಸಿ ,ಅವುಗಳ ನಿವಾರಣೆಗಾಗಿ ತಮ್ಮಿಂದಾಗುವ ಪ್ರಯತ್ನ ನಡೆಸಲಾಗುವುದು. ಉನ್ನತ ವ್ಯಾಸಂಗಕ್ಕೆ ನೆರವಾಗುವ ಮಾಹಿತಿಯನ್ನೊಳಗೊಂಡ ಮಾರ್ಗಸೂಚಿ ಕೈಪಿಡಿಯೊಂದನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು.ಮೂಡಬಿದ್ರೆ ಆಳ್ವಾಸ್ ಕಾಲೇಜುನ ಪ್ರಾಂಶುಪಾಲರಾದ ಡಾ. ಕುರಿಯನ್ ಸರ್ ಅವರಿಂದ ಉನ್ನತ ಶಿಕ್ಷಣ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.ಮುಂದಿನ ವರ್ಷದಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣದ ಶೈಕ್ಷಣಿಕ ನೆರವಿಗಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ ಅವರ ಹೆಸರಿನಲ್ಲಿ ಸ್ಕಾಲರ್ ಶಿಪ್ ಏರ್ಪಡಿಸಲಾಗುವುದು.ಈ ವರ್ಷದಲ್ಲಿ ಇಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಬಾಫಖಿ ತಂಙಳ್ ಫೌಂಡೇಶನ್ ವಹಿಸಿಕೊಳ್ಳುತ್ತದೆ.ಶೈಕ್ಷಣಿಕ, ಸಾಮಾಜಿಕ ,ಕ್ಷೇತ್ರದ ಹಲವು ಪ್ರಮುಖರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಡಾ.ಶೇಖ್ ಬಾವ ಮಂಗಳೂರು , ಜನರಲ್ ಕನ್ವೀನರ್ ಎ.ಎಸ್.ಇ ಕರೀಮ್ ಕಡಬ , ಕೋಶಾಧಿಕಾರಿ ರಿಯಾಝ್ ಹರೇಕಳ ಮತ್ತು ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಉಪಸ್ಥಿತಿ ಇದ್ದರು.
©2021 Tulunada Surya | Developed by CuriousLabs