ಮುಂಬೈ: ಮರಾಠಿ ಹಾಡು ಹಾಕಲಿಲ್ಲ ಎಂಬ ಕಾರಣಕ್ಕೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಕಾರ್ಯಕರ್ತರು ಮುಂಬೈ ಸಮೀಪದ ವಾಶಿಯಲ್ಲಿರುವ ಹೋಟೆಲ್‍ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮರಾಠಿ ಹಾಡು ಹಾಕುವ ವಿಚಾರವಾಗಿ ಎಂಎನ್‍ಎಸ್ ಕಾರ್ಯಕರ್ತರು ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಸಿಬ್ಬಂದಿ ಮತ್ತು ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು, ಆದರೆ ಗಲಾಟೆ ಹೆಚ್ಚಾಗಿ ಹಿಂಸಾತ್ಮಕಕ್ಕೆ ತಿರುಗಿತು. ಈ ಘಟನೆಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೇರೆ ಹಾಡುಗಳನ್ನು ಪ್ಲೇ ಮಾಡಲಾಗುತ್ತಿದೆ ಎಂದು ಕೆಲವು ಮಹಿಳೆಯರು ಹೋಟೆಲ್ ಸಿಬ್ಬಂದಿಯೊಂದಿಗೆ ವಾದ ಮಾಡುತ್ತಿರುತ್ತಾರೆ. ಈ ವೇಳೆ ಮ್ಯಾನೇಜರ್ ಮಹಿಳೆಯ ಕೋರಿಕೆಯನ್ನು ನಿರಾಕರಿಸುತ್ತಾರೆ. ಅಷ್ಟೋತ್ತಿಗೆ ಪಕ್ಕದಲ್ಲಿಯೇ ಇದ್ದ ಎಂಎನ್‍ಎಸ್ ಕಾರ್ಯಕರ್ತರೊಬ್ಬರು ನಾವು ಇರುವುದು ಮಹಾರಾಷ್ಟ್ರದಲ್ಲಿ, ಮರಾಠಿ ಹಾಡುಗಳನ್ನಷ್ಟೇ ಹಾಕಬೇಕು ಹೇಳಿದ್ದಾರೆ. ಇದಕ್ಕೆ ಮ್ಯಾನೇಜರ್ ಇಲ್ಲ ಎಂದಿದ್ದಕ್ಕೆ ಕಪಾಳಮೋಕ್ಷ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.ಇದೇ ವೇಳೆ ಇತರ ಕಾರ್ಯಕರ್ತರು ಸೇರಿಕೊಂಡು ಮ್ಯಾನೇಜರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಆದರೆ ಇದುವರೆಗೂ ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ.
