ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ ಹಾಗೂ ರುಬೆಲ್ಲಾ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪರಿಣಾಮಕಾರಿ ಸಹಕಾರ ಅತ್ಯಗತ್ಯ. ಖಾಸಗಿ ಆಸ್ಪತ್ರೆಗಳೂ ಇದಕ್ಕೆ ಕೈಜೋಡಿಸಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಕರೆ ಹೇಳಿದರು. ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಹಾಗೂ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಲಿಯೋದಂತೆ ದಡಾರ ಹಾಗೂ ರುಬೆಲ್ಲಾ ಕೂಡ ಜಿಲ್ಲೆಯಿಂದ ನಿರ್ಮೂಲನೆ ಆಗಬೇಕು. ಅದಕ್ಕಾಗಿ ವಹಿಸಬೇಕಾದ ಕ್ರಮಗಳು ಹಾಗೂ ಸೂಚಿಸಲಾದ ಜವಾಬ್ದಾರಿಗಳನ್ನು ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಾಗಿ ನಿಭಾಯಿಸಬೇಕು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಈ ಪ್ರಕರಣಗಳು ಇಳಿಮುಖವಾಗುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು. ದಡಾರ ನಿರ್ಮೂಲನೆಗೆ 9 ಹಾಗೂ 16 ತಿಂಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಶೇಕಡಾ ನೂರರಷ್ಟು ಲಸಿಕಾಕರಣ ಕಡ್ಡಾಯವಾಗಿ ಆಗಬೇಕು. ಯಾವ ಅರ್ಹ ಫಲಾನುಭವಿ ವಂಚಿತರಾಗಬಾರದು. ಅದಕ್ಕಾಗಿ ಕಾರ್ಮಿಕ ಇಲಾಖೆ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳನ್ನು ಪಟ್ಟಿ ಮಾಡಿ ಆರೋಗ್ಯ ಇಲಾಖೆಯಿಂದ ಕ್ಯಾಂಪ್‌ಗಳ ಆಯೋಜನೆಗೆ ಸಹಕರಿಸಬೇಕು. ದಡಾರ ಹಾಗೂ ರುಬೆಲ್ಲಾ ನಿರ್ಮೂಲನೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾದದ್ದು, ಅದನ್ನು ನಿಭಾಯಿಸುವಂತೆ ಸಲಹೆ ನೀಡಿದರು.
©2021 Tulunada Surya | Developed by CuriousLabs