ಮಂಗಳೂರು: ಮಂಗಳೂರು ನಗರದದಿಂದ ಹುಬ್ಬಳ್ಳಿ ನಡುವೆ ಇಂದಿನಿಂದ ವಿಮಾನ ಯಾನ ಆರಂಭವಾಗಲಿದೆ. ಈ ವಿಮಾನ ಯಾನ ಸೇವೆಯು ಕರಾವಳಿ ಹಾಗೂ ಉತ್ತರ ಕನ್ನಡ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಇಂಡಿಗೋ ವಿಮಾನ ಸಂಸ್ಥೆಯು ಮಂಗಳೂರು-ಹುಬ್ಬಳ್ಳಿ ನಡುವೆ ಹೊಸದಾಗಿ ವಿಮಾನ ಹಾರಾಟ ಮಾಡಲು ಮುಂದಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸೇರಿದಂತೆ ವಾರದಲ್ಲಿ 4 ದಿನಗಳು ಮಾತ್ರ ಈ ವಿಮಾನಯಾನ ಸೇವೆ ಇರಲಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಂಜೆ 5:15ಕ್ಕೆ ಟೇಕಾಫ್ ಆಗುವ ವಿಮಾನವು ಸಂಜೆ 6:15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ ಮಂಗಳೂರಿನಿಂದ ಸಂಜೆ 6:35ಕ್ಕೆ ಟೇಕಾಫ್ ಆಗುವ ವಿಮಾನವು ರಾತ್ರಿ 7:40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.
ಇದೇ ಮೊದಲ ಬಾರಿಗೆ ಈ ಮಾರ್ಗವಾಗಿ ವಿಮಾನ ಸೇವೆ ಆರಂಭವಾಗಲಿದ್ದು, ಇದು ಮಂಗಳೂರು- ಹುಬ್ಬಳ್ಳಿ ನಡುವೆ ಸಂಚಾರ ಬಯಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ. ಮಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಇದುವರೆಗೆ ವಿಮಾನ ಯಾನ ಸೇವೆಯು ಇರಲಿಲ್ಲ. ಈ ಕಾರಣದಿಂದ ಅನೇಕ ಪ್ರಯಾಣಿಕರು ಬಸ್ ಸಂಚಾರವನ್ನೇ ನೆಚ್ಚಿಕೊಂಡಿದ್ದರು. ತುರ್ತು ಸಂಚಾರಕ್ಕೆ ಇದರಿಂದ ತೀವ್ರ ಸಮಸ್ಯೆ ಎದುರಾಗುತ್ತಿತ್ತು. ಇದೀಗ ಹೊಸದಾಗಿ ಆರಂಭವಾಗಿರುವ ವಿಮಾನಯಾನ ಸೇವೆಯಿಂದ ಈ ಸಮಸ್ಯೆಗೆ ಮುಕ್ತಿ ದೊರಕಲಿದೆ.

