ಮಂಗಳೂರು: ಎರಡು ಪ್ರತ್ಯೇಕ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಗಳಾದ ನೈಜೀರಿಯಾ ಪ್ರಜೆ ಸಹಿತ ಕೇರಳದ ಯುವಕನನ್ನು ಕೊಣಾಜೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ನೈಜೀರಿಯಾದ ಸ್ಟ್ಯಾನ್ಲಿ ಚಿಮಾ(28) ಹಾಗೂ ಕೇರಳದ ಕಾಸರಗೋಡು ಜಿಲ್ಲೆ ಉಪ್ಪಳದ ಮಹಮ್ಮದ್ ರಮೀಝ್(24) ಬಂಧಿತರು. ಕೊಣಾಜೆ ಪೊಲೀಸರು ಈಗಾಗಲೇ 2 ಡ್ರಗ್ಸ್ ಮಾರಾಟ ಪ್ರಕರಣ ಪತ್ತೆ ಮಾಡಿದ್ದು, ಇದರಲ್ಲಿ 170 ಗ್ರಾಂ ಹಾಗೂ 65 ಗ್ರಾಂ ನಿಷೇಧಿತ ಮಾದಕದ್ರವ್ಯ ಎಂಡಿಎಂಎ ವಶಪಡಿಸಿದ್ದರು.
ಈ ಪ್ರಕರಣದಲ್ಲಿ 2 ಕಾರು, 9 ಮೊಬೈಲ್ ಸಹಿತ ಐವರನ್ನು ಪೊಲೀಸರು ಬಂಧಿಸಿ, ಪ್ರಮುಖ ಡ್ರಗ್ಸ್ ಜಾಲ ಬೇಧಿಸಿದ್ದರು. ಆದರೆ, ಎರಡೂ ಪ್ರಕರಣದ ಪ್ರಮುಖ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ, ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.