Thursday, April 25, 2024
spot_img
More

    Latest Posts

    ಮಂಗಳೂರು: ಪಚ್ಚನಾಡಿ ಪ್ರದೇಶದಲ್ಲಿ ಕಂಡು ಬಂದ ಕಲುಷಿತ ನೀರು

    ಮಂಗಳೂರು, ಸೆ. 01 : ಪಚ್ಚನಾಡಿ ಘನತ್ಯಾಜ್ಯ ಘಟಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರು ಅತಿಯಾಗಿ ಕಲುಷಿತಗೊಂಡಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ.

    ಈ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ವಿವಿಧ ಅಂಶಗಳು ಹೆಚ್ಚಿರುವುದನ್ನು ಗಮನಿಸಿದ ನ್ಯಾಯಾಲಯ, ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

    ಪಚ್ಚನಾಡಿಯ ಸಮಸ್ಯೆಯ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ, “ಮಂಗಳೂರು ನಗರದ ಜನತೆಗೆ ಕಲುಷಿತ ನೀರು ಪೂರೈಸುತ್ತಿರುವ ವಿಚಾರ ಗಂಭೀರವಾದದ್ದು. ಆದರೆ, ಈ ವಿಚಾರವಾಗಿ ಯಾವುದೇ ರೀತಿಯಾದ ಪ್ರತಿಕ್ರಿಯೆ ಬಂದಿಲ್ಲ” ಎಂದು ತಿಳಿಸಿದೆ.

    “ಪಚ್ಚನಾಡಿ ಸುತ್ತಮುತ್ತಲಿನ ನೀರಿನಲ್ಲಿ ಅಮೋನಿಯಾ ಹಾಗೂ ಕಬ್ಬಿಣದ ಅಂಶ ಹೆಚ್ಚಿರುವುದು ಕಂಡುಬಂದಿದೆ. ಕೊಳಚೆ ನೀರಿನಲ್ಲಿ ಕಂಡುಬರುವ ವಿಷಕಾರಿ ರಾಸಾಯನಿಕ ಅಂಶಗಳು ಕೂಡಾ ಪತ್ತೆಯಾಗಿವೆ. ಅಲ್ಲಿನ ನೀರು ಹೆಚ್ಚು ಕಲುಷಿತಗೊಂಡಿರುವುದನ್ನು ವರದಿ ದೃಢಪಡಿಸಿದೆ” ಎಂದು ನ್ಯಾಯಾಪೀಠ ಹೇಳಿದೆ.

    ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವಕೀಲರು ಮನವಿ ಮಾಡಿದರು. ನ್ಯಾಯಾಲಯವು ಪ್ರಕರಣವನ್ನು ಸೆ.13ಕ್ಕೆ ಮುಂದೂಡಿದ್ದು, ಸಮಸ್ಯೆಯ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚನೆ ನೀಡಿದೆ.

    ಮಂಗಳೂರು ನಗರ ನಿಗಮವು ಸಲ್ಲಿಸಿದ ಎಲ್ಲಾ ವರದಿಗಳನ್ನು ಪರಿಶೀಲಿಸಿ, ಅಭಿಪ್ರಾಯ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ಸೂಚಿಸಿದೆ. ಸಮಸ್ಯೆಯ ಪರಿಹಾರಕ್ಕೆ ಪಾಲಿಕೆ ಸೂಚನೆ ನೀಡಿದ್ದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss