ಮಂಗಳೂರು: ದೇರಳಕಟ್ಟೆ ಪರಿಸರದಲ್ಲಿ ಮಾದಕ ವಸ್ತು ಎಂಡಿಎಂಎ ಮಾರುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಒಟ್ಟು 6 ಲಕ್ಷ 41 ಸಾವಿರ ಮೌಲ್ಯದ ವಸ್ತುಗಳ ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಈಗಾಗಲೇ ಒಟ್ಟು 7 ಮಾದಕವಸ್ತು ಮಾರಾಟ ಪ್ರಕರಣ ದಾಖಲಾಗಿವೆ.
ದ.ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ತೌಡುಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಅಜೀಜ್ (42) ಬಂಧಿತ ಆರೋಪಿ. ಈತನಿಂದ 26 ಗ್ರಾಂ ತೂಕದ 1 ಲಕ್ಷ 30 ಸಾವಿರ ಮೌಲ್ಯದ MDMA, ಮಾದಕವಸ್ತು ಸಾಗಾಟಕ್ಕೆ ಉಪಯೋಗಿಸಿದ ಕಾರು, ಮೊಬೈಲ್ ಫೋನ್ ಸೇರಿ ಒಟ್ಟು 6 ಲಕ್ಷ 41 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಸಮಯದಲ್ಲಿ ಅಬ್ದುಲ್ ಅಜೀಜ್, ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಉಳಿದ ಆರೋಪಿಗಳನ್ನು ಹೆಡೆಮುರಿ ಕಟ್ಟಲು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.