Thursday, March 28, 2024
spot_img
More

    Latest Posts

    ಮಂಗಳೂರು : ನವಮಂಗಳೂರು ಬಂದರಿನಲ್ಲಿ ಶೇಖರಿಸಿಟ್ಟ ಮಲೇಷ್ಯಾ ಮರಳನ್ನು ವಿತರಿಸಲಾಗುವುದು : ಜಿಲ್ಲಾಧಿಕಾರಿ ರವಿಕುಮಾರ್‌

    ಮಂಗಳೂರು : ಮಲೇಷ್ಯಾದಿಂದ ಐದು ವರ್ಷಗಳ ಹಿಂದೆ ಆಮದು ಮಾಡಿ ನವಮಂಗಳೂರು ಬಂದರಿನಲ್ಲಿ ಶೇಖರಿಸಿಟ್ಟಿರುವ 75,400 ಮೆಟ್ರಿಕ್‌ ಟನ್‌ ಮರಳನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ವಿತರಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಹೇಳಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಅವರು, ಎನ್‌ಎಂಪಿಎಯಲ್ಲಿ ಅಷ್ಟು ಪ್ರಮಾಣದ ಮರಳು ಸಂಗ್ರಹ ಇರುವ ವಿಚಾರ ತಿಳಿದು ಅಚ್ಚರಿಯಾಗಿದ್ದು, ಇದು ಎಂಸ್ಯಾಂಡ್‌ ಅಲ್ಲ, ಆದರೆ ಉತ್ತಮ ಗುಣಮಟ್ಟದ ಮರಳಾಗಿದೆ. ಅದನ್ನು 10 ಟನ್‌ಗೆ 10,000 ರೂ.ಗಳಂತೆ ಜಿಲ್ಲೆಯಲ್ಲಿ ಪೂರೈಕೆ ಮಾಡಲಾಗುವುದು ಎಂದರು.

    ಇನ್ನು ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಡೆಗಳಿಂದ ವಶಪಡಿಸಿಕೊಳ್ಳಲಾದ 1 ಸಾವಿರ ಮೆಟ್ರಿಕ್‌ ಟನ್‌ ಮರಳು ಲಭ್ಯವಿದ್ದು, ಅದನ್ನು ಕೂಡ ಲೋಡ್‌ ಒಂದಕ್ಕೆ 7 ಸಾವಿರ ರೂ.ಗಳಂತೆ ವಿತರಿಸಲಾಗುವುದು ಎಂದಿದ್ದಾರೆ.

    ಎನ್‌ಎಂಪಿಎಯಲ್ಲಿ ಮರಳು ಸಂಗ್ರಹದ ಜಾಗದಲ್ಲಿ ಸೂಕ್ತ ಸಿಸಿ ಕೆಮರಾಗಳ ಕಣ್ಗಾವಲಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಂಡು ಆರ್‌ಟಿಒದಿಂದ ಪರವಾನಿಗೆ ಹೊಂದಿರುವ ಲಾರಿಗಳ ಮೂಲಕ ಮರಳು ಅಗತ್ಯವಿದ್ದವರಿಗೆ ವಿತರಿಸಲಾಗುವುದು. ಪ್ರತೀ ದಿನ ವಿತರಣೆಯಾಗುವ ಪ್ರಮಾಣ, ಸಾಗಿಸುವ ಲಾರಿಗಳ ಕುರಿತಂತೆ ಸೂಕ್ತ ಮಾಹಿತಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜತೆಗೆ ಜಿಲ್ಲಾಡಳಿತ, ಪೊಲೀಸ್‌ ಆಯುಕ್ತರು, ಅಧೀಕ್ಷಕರು ಹಾಗೂ ಮಾಧ್ಯಮದ ಮೂಲಕ ಎಲ್ಲರಿಗೂ ಲಭಿಸುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಇನ್ನು ನವಮಂಗಳೂರು ಬಂದರಿನಲ್ಲಿ ಖಾಸಗಿ ಸಂಸ್ಥೆಯೊಂದು ಒಂದು ಲಕ್ಷ ಟನ್‌ ಮರಳು ಆಮದು ಮಾಡಿಕೊಂಡಿದ್ದು, ಆದರೆ ಅದರ ವಿತರಣೆಗೆ ಸರಕಾರ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ್ದು 2019ರ ಫೆಬ್ರವರಿ 11ರಂದು ಹೊರರಾಜ್ಯಗಳಿಗೆ ಮರಳು ಸಾಗಾಣಿಕೆಗೆ ಪರವಾನಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಲಾಗಿತ್ತು.

    75,400 ಮೆ.ಟನ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ ಜಿಲ್ಲೆಯಲ್ಲಿನ ಸಾರ್ವಜನಿಕ ಕಟ್ಟಡ ಕಾಮಗಾರಿಗಳಿಗೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss