Saturday, April 20, 2024
spot_img
More

    Latest Posts

    ಪುತ್ತೂರು: ಪದ್ಮಶ್ರೀ ಮಹಾಲಿಂಗ ನಾಯ್ಕರಿಗೆ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ

    ಪುತ್ತೂರು: ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅವರಿಗೆ ಸಿಕ್ಕಿರುವ ಪ್ರಶಸ್ತಿಯು ಕೃಷಿಗೆ ಸಂದ ಗೌರವವಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

    ಅವರು ಶನಿವಾರ ಪುತ್ತೂರಿನ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ನೀಡಲಾದ ‘ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತಕೃಷಿಕ ಮಹಾಲಿಂಗ ನಾಯ್ಕ ಅಮೈ ಅವರಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿ ಮಾತನಾಡಿದರು.

    ದೇಶದ ನೈಜ ಬದುಕು ಹಳ್ಳಿಯಲ್ಲಿದ್ದು, ಋಷಿ, ಕೃಷಿ ಸಂಸ್ಕೃತಿ ದೇಶದ ಉನ್ನತಿಯನ್ನು ಹೆಚ್ಚಿಸಿದೆ. ಅನ್ನದಾತನ ಸಾಧನೆಯನ್ನು ಸ್ಮರಿಸುವ ಮೂಲಕ ಮತ್ತಷ್ಟು ಅನ್ನದಾತರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

    ಅಭಿನಂದನಾ ಮಾತುಗಳನ್ನಾಡಿದ ಉಪನ್ಯಾಸಕ ಡಾ. ನರೇಂದ್ರ ರೈ ದೇರ್ಲ ಅವರು ಮಹಾತ್ಮ ಗಾಂಧೀಜಿಯವರು ಹಳ್ಳಿಗಳನ್ನು ಭಾರತದ ಆತ್ಮ ಎಂದಿದ್ದಾರೆ. ಅ ಹಳ್ಳಿಯ ಆತ್ಮ ಮಹಾಲಿಂಗ ನಾಯ್ಕ ನಂತವರು ದೇಶ ಕಟ್ಟಿದವರ, ದುಡಿಯುವವರ ಪ್ರತಿನಿಧಿಯಾಗಿ ಕಾಣುತ್ತಾರೆ ಎಂದರು. ಯಾರೂ ಮಾಡದ್ದನ್ನು ನಾವು ಮಾಡಬಹುದು ಎಂದು ತೋರಿಸಿಕೊಟ್ಟ ಮಹಾಲಿಂಗ ನಾಯ್ಕರು ಭೂಮಿಯಲ್ಲಿ ಕೃಷಿ ತಪಸ್ಸು ಮಾಡಿದ ನೆಲದ ಸಂತ ಎಂದು ಹೇಳಿದರು.

    ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಮಹಾಲಿಂಗ ನಾಯ್ಕ್ ಅಮೈ, ನನ್ನಲ್ಲಿ ವಿದ್ಯೆ ಇಲ್ಲದಿದ್ದರೂ ದುಡಿಯಲು ತಿಳಿದಿತ್ತು. ನೀರು ಸಿಗುವುದು ಅಸಾಧ್ಯ ಎನ್ನುವ ಗುಡ್ಡೆಯಲ್ಲಿ ಬಾವಿ, 6 ಸುರಂಗ ಕೊರೆದು ವಿಫಲವಾದಾಗ ಕೆಲವರು ಗೇಲಿ ಮಾಡಿದ್ದರು. ಆದರೆ 7 ನೇ ಸುರಂಗದಲ್ಲಿ ದೇವರ ದಯೆಯಿಂದ ನೀರು ಪಡೆದೇ ಬಿಟ್ಟೆ. ಅನಂತರ ನೀರು ವ್ಯರ್ಥ ಮಾಡದೆ ಕೃಷಿ ಮಾಡಿದೆ. ಪದ್ಮಶ್ರೀ ಪುರಸ್ಕಾರ ನಮ್ಮ ರಾಜ್ಯಕ್ಕೆ, ರೈತ ವರ್ಗಕ್ಕೆ ಸಿಕ್ಕ ಗೌರವ ಎಂದು ಅಭಿಪ್ರಾಯ ಹಂಚಿಕೊಂಡರು.

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ದೀಪ ಪ್ರಜ್ವಲನ ಮಾಡಿ ಶುಭಹಾರೈಸಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ. ಸುಂದರ ನಾಯ್ಕ್, ಉಪಾಧ್ಯಕ್ಷ ಪಿ. ಚಂದ್ರಶೇಖರ ನಾೈಕ್, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಉಪಸ್ಥಿತರಿದ್ದರು.

    ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ ಎ. ವಿ. ನಾರಾಯಣ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಹಾಗೂ ವತ್ಸಲಾ ರಾಜ್ನಿ ಕಾರ್ಯಕ್ರಮ ನಿರ್ವಹಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss