ಮಂಗಳೂರು: ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999ರನ್ವಯ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶದಂತೆ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮತ್ತು ಉಪಯೋಗವನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿ ಮದ್ದುಗಳನ್ನು ಉಪಯೋಗಿಸ ಬಾರದು. ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಪಟಾಕಿ ಬಳಕೆ ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಶಬ್ದ ವಲಯಗಳೆಂದು ಘೋಷಿ ಸಲ್ಪಟ್ಟಿರುವ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟು ಮಾಡುವ ನಿಷೇಧಿತ ಪಟಾಕಿ, ಸಿಡಿಮದ್ದು ಬಳಸಬಾರದು.
ಸುಪ್ರೀಂ ಕೋರ್ಟ್ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸುರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು. ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿ ಮತ್ತು ಸಿಡಿಮದ್ದು ಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಫೋಟದಿಂದ ಅಪಾಯ ಗಳಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶ ಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಸಿಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
