ಉಡುಪಿ: ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕೊಡಮಾಡುವ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರಕ್ಕೆ ತೆಂಕುತಿಟ್ಟಿನಲ್ಲಿ ಮೂರು ದಶಕಗಳ ಕಾಲ ಭಾಗವತರಾಗಿ, ಅನುಭವಿ ರಂಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕುರಿಯ ಗಣಪತಿ ಶಾಸ್ತ್ರಿಗಳು ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟು ಯಕ್ಷಗಾನದ ಗುರುಕುಲವೆಂದು ಮನ್ನಣೆ ಪಡೆದ ಕುರಿಯ ಮನೆತನದವರಾದ ಗಣಪತಿ ಶಾಸ್ತ್ರಿಗಳು, ತಮ್ಮ ದೊಡ್ಡತಂದೆಯವರಾದ ಕುರಿಯ ವಿಟಲ ಶಾಸ್ತ್ರಿಗಳ ಶಿಷ್ಯರಾಗಿ ಪ್ರಸಿದ್ಧ ವೇಷಧಾರಿಯಾಗಿದ್ದವರು. ಅಗರಿ ಶ್ರೀನಿವಾಸ ಭಾಗವತರ ಪ್ರೇರಣೆಯೊಂದಿಗೆ ಭಾಗವತಿಕೆ ಕ್ಷೇತ್ರವನ್ನು ಪ್ರವೇಶಿಸಿದರು.
ಕಟೀಲು ಮೇಳದಲ್ಲಿ ಪ್ರದಾನ ಭಾಗವತರಾಗಿ ಮೂರು ದಶಕಗಳ ವ್ಯವಸಾಯದ ಅವಧಿಯಲ್ಲಿ ನೆಡ್ಲೆ ನರಸಿಂಹ ಭಟ್, ಮರವಂತೆ ನರಸಿಂಹದಾಸ, ಪಡ್ರೆ ಚಂದ್ರು, ಕೇದಗಡಿ ಗುಡ್ಡಪ್ಪ ಗೌಡ, ಮುದುಕುಂಜ ವಾಸುದೇವ ಪ್ರಭು, ಕುಡಾಣ ಗೋಪಾಲ ಭಟ್, ಕೋಡಿ ಕುಷ್ಠ ಗಾಣಿಗ, ಪುಂಡರಿಕಾಕ್ಷ ಉಪಾಧ್ಯಾಯ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮುಂತಾದ ಹಿರಿಯ ಕಲಾವಿದರೊಂದಿಗೆ ಒಡನಾಟದ ಅನುಭವವನ್ನು ಹೊಂದಿದ್ದಾರೆ.
ಮೇ 11ರ ಪೂರ್ವಾಹ್ನ 11ಕ್ಕೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು 50,000 ರೂ. ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ಪ್ರಕಟನೆ ತಿಳಿಸಿದೆ.
