ಮುಂಡಿತ್ತಡ್ಕ :- ಶ್ರೀ ಮಹಾವಿಷ್ಣು ಭಜನಾ ಸಂಘ(ರಿ), ಶ್ರೀ ವಿಷ್ಣು ಕಲಾವೃಂದ(ರಿ) ಹಾಗೂ ಶ್ರೀ ವಿಷ್ಣು ಮಹಿಳಾ ಸಂಘ(ರಿ) ವಿಷ್ಣು ನಗರ ಮುಂಡಿತ್ತಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಬಹಳ ವಿಜೃಂಭಣೆಯಿಂದ ವಿಷ್ಣು ನಗರ ಮುಂಡಿತ್ತಡ್ಕದಲ್ಲಿ ಜರಗಿತು.ಬೆಳಗ್ಗೆ ಮುಗು ಶ್ರೀ ಸುಬ್ರಾಯ ದೇವಸ್ಥಾನದ ಅರ್ಚಕರಾದ ಶ್ರೀ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.ಶ್ರೀ ವಿಷ್ಣು ಮಹಿಳಾ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಕುಸುಮ ಬೀರಿಕುಂಜ ಇವರು ಧ್ವಜಾರೋಹಣ ನಡೆಸುವ ಮೂಲಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ ಪುಟ್ಟ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಜರಗಿದವು.ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ಮೀರಾ ಆಳ್ವ, ವಿ ಎಚ್ ಪಿ ಜಿಲ್ಲಾ ಉಪಾಧ್ಯಕ್ಷೆ ಮಂಗಳೂರು ಗ್ರಾಮಾಂತರ ಧಾರ್ಮಿಕ ಭಾಷಣಗೈದು ಕೃಷ್ಣನ ಸಂದೇಶಗಳನ್ನು ಜನರಿಗೆ ತುಲುಪಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಕಲಾವೃಂದದ ಅಧ್ಯಕ್ಷರಾದ ಶ್ರೀ ಸುನಿಲ್ ಮಾಸ್ತರ್ ಮುಂಡಿತ್ತಡ್ಕ ವಹಿಸಿ ಮಾತನಾಡಿದರು. ಶ್ರೀ ಮಹಾವಿಷ್ಣು ಭಜನಾ ಸಂಘದ ಅಧ್ಯಕ್ಷರಾದ ಶ್ರೀ ಶಾಂತ ಕುಮಾರ್ ಮುಂಡಿತ್ತಡ್ಕ ಶುಭ ಹಾರೈಸಿದರು.ಶ್ರೀ ವಿಷ್ಣು ಮಹಿಳಾ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಕುಸುಮ ಬೀರಿಕುಂಜ ಉಪಸ್ಥಿತರಿದ್ದರು.ನಂತರ ವೇದಿಕೆಯಲ್ಲಿ ಬಾಲಗೋಕುಲ ಸ್ಪರ್ಧೆಯು ಜರಗಿತು.ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶ್ರೀ ವಿಷ್ಣು ಕಲಾವೃಂದದ ನೇತೃತ್ವದಲ್ಲಿ ನಡೆದ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಅಷ್ಟಮಿಯ ಪ್ರಯುಕ್ತ ಜರಗಿದ ವಿವಿಧ ಆಟೋಟ ಹಾಗೂ ಇತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಮುಖ್ಯ ಅತಿಥಿಗಳು ವಿತರಿಸಿದರು.

ಬಾಲಗೋಕುಲ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಶ್ರೀ ವಿಷ್ಣು ಕಲಾವೃಂದದ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಸ್ವಾಗತಿದ ಕಾರ್ಯಕ್ರಮಕ್ಕೆ ಭಜನಾ ಮಂದಿರದ ಕೋಶಾಧಿಕಾರಿ ಶ್ರೀ ಬಾಲಕೃಷ್ಣ ಮಾಸ್ತರ್ ಧನ್ಯವಾದವಿತ್ತರು.ವಿಷ್ಣು ಕಲಾವೃಂದದ ಹಿರಿಯ ಸದಸ್ಯರಾದ ಶ್ರೀ ಸುಂದರ ಕಟ್ನಡ್ಕ ಸಮಾಂಭವನ್ನು ನಿರೂಪಿಸಿದರು.ಊರ ಹಾಗೂ ಪರವೂರಿನ ಭಗವದ್ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ದೇವರ ಕೃಪೆಗೆ ಪಾತ್ರರಾದರು.ಸಭಾ ಕಾರ್ಯಕ್ರಮದ ನಂತರ ಶ್ರೀ ಅಯ್ಯಪ್ಪ ಭಜನಾ ಸಂಘ ಬಣ್ಪುತ್ತಡ್ಕ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಶ್ರೀ ದೇವರಿಗೆ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.
