Tuesday, September 17, 2024
spot_img
More

    Latest Posts

    ಸಾಧನೆಗೆ ಬಡತನದ ಸವಾಲು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಕೆ.ಕೆ. ಶೆಟ್ಟಿ

    ಬ್ಬ ಗಾಡ್‌ಫಾದರ್ ಬೆನ್ನಿಗಿದ್ದಾನೆ ಎಂಬ ಕಾರಣಕ್ಕೆ ಯಶಸ್ಸು ಲಭಿಸುವುದಿಲ್ಲ. ಕಿಂಗ್ ಮೇಕರ್ ಜೊತೆಗಿದ್ದ ಕಾರಣಕ್ಕೆ ಗೆಲುವೆಂಬುದು ನಮ್ಮ ಹಿಂದೆ ಓಡಿ ಬರುವುದಿಲ್ಲ. ಯಾರೋ ಜ್ಯೋತಿಷಿ ಭವಿಷ್ಯ ಹೇಳಿದ ತಕ್ಷಣ ಕೈಕಟ್ಟಿ ಕುಳಿತುಕೊಂಡರೆ ಸಕ್ಸಸ್‌ನ ಏಣಿ ಏರಲು ಆಗುವುದೇ ಇಲ್ಲ. ಶ್ರಮ, ಶ್ರದ್ಧೆ, ಉತ್ಸಾಹ, ಶಿಸ್ತು,ಕನಸು ಮತ್ತು ನಿರೀಕ್ಷೆಗಳಿಂದ ಮಾತ್ರ ಗೆಲುವು ಪಡೆಯಲು ಸಾಧ್ಯ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇರಿಸಿಕೊಂಡು,ಅದರಂತೆ ನಡೆದು, ದುಡಿದು ಇಂದು ದೇಶದ ಹೆಸರಾಂತ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡವರು ಪುಣೆ ಅಹಮದ್ ನಗರದ ಕೆ.ಕೆ. ಶೆಟ್ಟಿ.
    ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಇಚ್ಲಂಪಾಡಿ ಗ್ರಾಮದ ಕುತ್ತಿಕಾರ್ ಯಜಮಾನ ಸುಬ್ಬಣ್ಣ ಶೆಟ್ಟಿ ಮತ್ತು ಕುಸುಮಶೆಟ್ಟಿ ದಂಪತಿಗಳ ಪುತ್ರ ಕುತ್ತಿಕಾರ್ ಕಿಂಜಣ್ಣ ಶೆಟ್ಟಿ (ಕೆ.ಕೆ.ಶೆಟ್ಟಿ) ಎಂಬ ಪಿಯುಸಿ ಓದಿದ ಯುವಕ ೪೦ ವರ್ಷಗಳ ಹಿಂದೆ ತನ್ನ ಪುಟ್ಟ ಹಳ್ಳಿಯಿಂದ ಬದುಕಿನ ಪ್ರಯಾಣ ಆರಂಭಿಸಿ, ಉದ್ಯೋಗ ಅರಸಿಕೊಂಡು ಸಾವಿರಾರು
    ಮೈಲಿ ದೂರದ ಪುಣೆಯಲ್ಲಿ ಬದುಕು-ಭವಿಷ್ಯ ಕಟ್ಟಿಕೊಳ್ಳಲು ಪಟ್ಟ ಕಷ್ಟ, ಉದ್ಯಮದ ಒಂದೊಂದೇ ಮೆಟ್ಟಿಲನ್ನು ಏರಲು ವಹಿಸಿದ ಶ್ರಮ, ಪ್ರಸಿದ್ಧ ಉದ್ಯಮಿಯಾಗಿ ಬೆಳೆದದ್ದು, ಸಮಾಜಸೇವಕರಾಗಿ, ಪರೋಪಕಾರಿಯಾಗಿ ಗುರುತಿಸಿಕೊಂಡದ್ದು, ಪಕ್ಷಜಾತಿ-ಧರ್ಮ ಮೀರಿ ಲಕ್ಷಾಂತರ ಜನರ ಪ್ರೀತಿ ಗಳಿಸಿದ ಕಥೆ ಇದೆಯಲ್ಲ? ಅದು ಅರ್ಧ ಡಜನ್ ಸಿನಿಮಾಗಾಗುವಷ್ಟಿದೆ.
    ಕೆ.ಕೆ. ಶೆಟ್ಟಿ ಅವರ ತಂದೆ ಯಜಮಾನ ಸುಬ್ಬಣ್ಣ ಶೆಟ್ಟಿ ಯವರು ಹತ್ತೂರ ಜನರಿಗೆ ನೆರವಾದವರು. ಆದರೆ
    ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಇದೇ ಕಾರಣಕ್ಕಾಗಿ ಅನುಭವಿಸಿದ ಅವಮಾನ, ನಿಂದನೆ, ಹೀಗಳಿಕೆಗಳಿಂದ
    ತುಂಬಿದ ಬಾಲ್ಯಗಳಿಂದಾಗಿ ಅವರ ಅನೇಕ ಸಂತಸಗಳು ಸುಟ್ಟು ಹೋಗಿದ್ದವು. ಬದುಕಲ್ಲೊಂದು ನೆಲೆ ಕಾಣಬೇಕು,
    ತನ್ಮೂಲಕ ತಂದೆ -ತಾಯಿಗೆ ನೆರವಾಗಬೇಕು ಎಂಬ ನಿರ್ಧಾರ ಅವರನ್ನು ಇಚ್ಲಂಪಾಡಿ ಎಂಬ ಪುಟ್ಟ
    ಹಳ್ಳಿಯಿಂದ ಪುಣೆಯ ಬಸ್ಸು ಹತ್ತಿಸಿತು.
    ಆರಂಭದಲ್ಲಿ ಸಂಬಂಧಿಕರ ಹೋಟೆಲ್‌ನಲ್ಲಿ ಕೆಲಸಕ್ಕಿದ್ದರು.ಆನಂತರ ಅಲ್ಲಿಯೇ ರೈಲ್ವೆ ಕ್ಯಾಂಟೀನ್‌ನಲ್ಲಿ ದುಡಿದರು.
    ಕ್ರಮೇಣ ತನ್ನದೇ ಆದ ಪುಟ್ಟ ಹೋಟೆಲೊಂದನ್ನು ಆರಂಭಿಸಿದರು. ಕನಿಷ್ಠ ವ್ಯಾಪಾರವಾದರೆ ಸಾಕು ಅಂತ ಭಾವಿಸಿದ್ದರು. ವ್ಯಾಪಾರ ಚೆನ್ನಾಗಿ ಆಗಿ ಕೈಗೆ ನಾಲ್ಕು ದುಡ್ಡು ಬರುತ್ತಿದ್ದಂತೆಯೇ ವ್ಯಾಪಾರವನ್ನು ವಿಸ್ತರಿಸುವುದು ಸಾಧ್ಯವಾ ಅಂತ ಯೋಚಿಸಿದರು. ಇದೇ ಹೊತ್ತಿಗೆ ಕಿರ್ಲೋಸ್ಕರ್ ಎಂಬ ಸಂಸ್ಥೆಯ ಕ್ಯಾಂಟೀನ್ ಆರಂಭಿಸುವ ಅವಕಾಶ ದೊರೆಯಿತು . ನಂತರದ ದಿನಗಳಲ್ಲಿ ನೋಡುತ್ತಿದ್ದಂತೆ ಕೈ ಹತ್ತಿದ ವ್ಯವಹಾರ ಅವರನ್ನಿಂದು ೫೨ ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳ ಮಾಲೀಕ ಮತ್ತು ತ್ರೀ ಸ್ಟಾರ್ ಹೊಟೇಲೊಂದರ ಪಾಲುದಾರರನ್ನಾಗಿಯೂ ಮಾಡಿದೆ.
    ಕೆ.ಕೆ. ಶೆಟ್ಟಿಯವರ ಪಾಲಿಗೆ ಯಶಸ್ಸು ಎಂಬುದು ಸುಮ್ಮನೆ ಬಂದಿಲ್ಲ. ಅವರ ಜೀವನದಲ್ಲಾಗಲಿ, ಉದ್ಯಮದಲ್ಲಾಗಲಿ
    ಲಕ್ ಅನ್ನುವುದು ಇದ್ದಕ್ಕಿದ್ದಂತೆ ಸಂಭವಿಸಲಿಲ್ಲ. ಗೆಲುವು ಅದೆಲ್ಲಿಂದಲೋ ಬಂದು ಕೈಹಿಡಿಯಲಿಲ್ಲ. ಅವರ ಬದುಕಿನ
    ಗ್ರಾಫ್‌ನಲ್ಲೂ ಅಷ್ಟೆ, ಅಲ್ಲಿ ಗೆಲುವಿನೊಂದಿಗೆ ಸೋಲುಗಳ ಜಲಪಾತವೂ ಇತ್ತು. ಹಾಗಾಗಿ ಕಷ್ಟಗಳನ್ನು ಕೂಡ
    ಸಮರ್ಥವಾಗಿ ಎದುರಿಸಿ ನಿಂತರು. ಆಸೆಗಳ ಕಾಳ್ಗಿಚ್ಚು ನಮ್ಮಲ್ಲಿ ಉರಿಯದೆ ಹೋದರೆ ಯಾವ ಗೆಲುವನ್ನು ಧಕ್ಕಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆ ಅವರದ್ದು. ಆರಂಭದಲ್ಲಿ ಪುಟ್ಟದೊಂದು ಕ್ಯಾಂಟೀನ್ ಆರಂಭಿಸುವಾಗಲು
    ಅಷ್ಟೇ. ಸೋಲಬಾರದು, ಸೋಲಲೇಬಾರದು ಅಂತ ನಿರ್ಧರಿಸಿಯೇ ಹೊರಟವರು.
    ತುಂಬಾ ಚಿಕ್ಕ ವಯಸ್ಸಿನಲ್ಲಿ ಬಡತನ ಕಂಡವರು ಕೆ.ಕೆ. ಶೆಟ್ಟಿ. ಏನನ್ನಾದರೂ ಸಾಧಿಸಬೇಕು, ತುಂಬಾ ಎತ್ತರಕ್ಕೆ
    ತಲುಪಿಕೊಳ್ಳಬೇಕು ಎಂದು ಅದೇ ವಯಸ್ಸಿನಲ್ಲಿ ಕನಸು ಕಂಡವರು. ಶ್ರದ್ಧೆ ಮತ್ತು ಪ್ರಾಮಾಣಿಕ ದುಡಿಮೆಯಿಂದ
    ಆ ಕನಸನ್ನು ನನಸಾಗಿಸಿಕೊಂಡವರು.
    ೧೯೮೪ರಲ್ಲಿ ಪುಣೆಯ ಅಹಮದ್ ನಗರದಲ್ಲಿ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಸರ್ವಿಸ್ ಎಂಬ
    ಸಂಸ್ಥೆಯನ್ನು ಆರಂಭಿಸಿದರು. ಅದೀಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರಸಿದ್ಧ ಕಾರ್ಪೊರೇಟ್ ಸಂಸ್ಥೆಗಳ
    ಇಂಡಸ್ಟ್ರಿಯಲ್ ಕ್ಯಾಂಟೀನ್ ನಿರ್ವಹಣೆಯನ್ನು ಶಬರಿ ಕ್ಯಾಟರಿಂಗ್ ವಹಿಸಿಕೊಂಡಿದೆ. ಪ್ರತಿನಿತ್ಯ ೫೦,೦೦೦ ಹೆಚ್ಚು
    ಜನರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ೨೦೦೦ಕ್ಕೂ ಹೆಚ್ಚು ನೌಕರರಿದ್ದಾರೆ. ನಾಸಿಕ್, ಪುಣೆ, ಔರಂಗಬಾದ್,
    ಪಾಂಡಿಚೇರಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲೂ ಇಂಡಸ್ಟ್ರಿಯಲ್ ಕ್ಯಾಂಟೀನ್
    ಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ. ಪುಣೆಯಲ್ಲಿಯೇ ಬಿಝ್ ತಮನ್ನಾ ಹೆಸರಿನ ತ್ರೀ ಸ್ಟಾರ್ ಹೋಟೆಲ್ ಕೂಡ ಇದೆ.
    ಕಷ್ಟಗಳನ್ನು ಅನುಭವಿಸುತ್ತಾ ಅನುಭವಿಸುತ್ತಲೇ ಸುಖದ ದಿನಗಳನ್ನು ಅವರು ಕಂಡುಕೊಂಡಿದ್ದಾರೆ.
    ಕಳೆದ ೩೭ ವರ್ಷಗಳಿಂದ ಎರಡು ಸಾವಿರ ಜನರನ್ನು ಕಟ್ಟಿಕೊಂಡು ಉದ್ಯಮ ನಡೆಸುತ್ತಿದ್ದಾರೆ. ಕೆಲಸ
    ಮಾಡುವವರಿಂದ ಕೆಲಸ ತೆಗೆಯುವ ಉನ್ನತ ಕೆಲಸಗಾರರ ತಂಡವನ್ನು ಹೊಂದಿರುವ ಟೀಮ್
    ಲೀಡರ್‌ಗಳ ತಂಡ ಅವರೊಂದಿಗಿದೆ. ಈ ಟೀಂ ಲೀಡರ್‌ಗಳು ಕೆ.ಕೆ. ಶೆಟ್ಟರನ್ನು ಚೆನ್ನಾಗಿ ಅರ್ಥ
    ಮಾಡಿಕೊಂಡಿದ್ದಾರೆ. ಸಂಸ್ಥೆಗೆ ಯಾವುದರಿಂದ ಲಾಭವಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ. ಇಂತಹ
    ಪ್ರಾಮಾಣಿಕ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿ ಮೊತ್ತದ ನೆರವನ್ನು ಕೆ.ಕೆ. ಶೆಟ್ಟರೂ ನೀಡಿದ್ದಾರೆ. ಕೆಲಸದ
    ವಿಷಯದಲ್ಲಿ ಉದ್ಯೋಗಿಗಳು ಉದಾಸೀನ ತೋರಿದರೆ ಕರೆದು ಎಚ್ಚರಿಸುತ್ತಾರೆ. ದುಡ್ಡು-ದುಡಿಮೆಯ
    ವಿಷಯದಲ್ಲಿ ಅಪ್ರಮಾಣಿಕರಾದವರು ಅವರ ಹತ್ತಿರ ಬರುವುದೂ ಅಸಾಧ್ಯ..

    *ದುಡಿಮೆಯೇ ದೇವರೆನ್ನುವ ತುಂಬು ಕುಟುಂಬ*

    ಪರಿಶ್ರಮದಿಂದ, ಶ್ರದ್ಧೆಯಿಂದ, ಉನ್ನತ ಕನಸುಗಳಿಂದ ಬದುಕು ಮತ್ತು ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬಹುದು
    ಎಂಬುದಕ್ಕೆ ನಮ್ಮ ನಿಮ್ಮ ನಡುವೆ ಮಾದರಿಯಾಗಿರುವವರು ಕೆ.ಕೆ. ಶೆಟ್ಟಿ. ಅವರೀಗ ಶಬರಿ ಇಂಡಸ್ಟ್ರಿಯಲ್
    ಕ್ಯಾಂಟೀನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕರು. ಪತ್ನಿ ವಿನಯ ಕೆ. ಶೆಟ್ಟಿ ಮತ್ತು ಮಕ್ಕಳಾದ
    ಅನುಷ್ ಶೆಟ್ಟಿ, ಯಶ್ ಶೆಟ್ಟಿ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಕೆ. ಶೆಟ್ಟಿ ಅವರ ಉದ್ಯಮ
    ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಹಿಂದೆ ಇವರೆಲ್ಲರ ಬೆಂಬಲವಿದೆ.
    ದುಡಿದ ದುಡ್ಡು ಸಾಕಷ್ಟಿದ್ದರೂ ಇವರ್ಯಾರು ಕೂತು ತಿನ್ನುತ್ತಿಲ್ಲ. ಇವತ್ತಿಗೂ ದುಡಿಯುತ್ತಲೇ ಇದ್ದಾರೆ.
    ಹೇಗೆ ಕೆ.ಕೆ. ಶೆಟ್ಟಿಯವರ ಮಕ್ಕಳು ತಂದೆ ಹಾಕಿದ ಗೆರೆ ದಾಟುವುದಿಲ್ಲವೋ ಹಾಗೆಯೇ ತಾಯಿ ಕುಸುಮಾ
    ಶೆಟ್ಟಿ, ಅಪ್ಪಣೆಯನ್ನು ಕೆ.ಕೆ. ಶೆಟ್ಟರು ಇವತ್ತಿಗೂ ಮೀರುವುದಿಲ್ಲ. ಇಡೀ ಕುಟುಂಬ ಮನಸ್ಸಿಗೆ ನೆಮ್ಮದಿ ಬೇಕು
    ಅಂತ ಯಾವತ್ತೂ ಚಡಪಡಿಸಿಲ್ಲ. ಏಕೆಂದರೆ ಅವರ ಮನಸ್ಸಿನ ನೆಮ್ಮದಿ ಇವತ್ತಿನವರೆಗೂ ಹಾಳಾಗಿಲ್ಲ. ಇನ್ನ?
    ಶ್ರೀಮಂತರಾಗುವುದು ಹೇಗೆ ಎಂಬ ಯೋಚನೆ ಇವರಲ್ಲಿ ಯಾವತ್ತಿಗೂ ಬರಲೇ ಇಲ್ಲ. ಬರುವುದೂ ಇಲ್ಲ.
    ಪುಣೆ ಬಂಟರ ಸಂಘ ಮತ್ತು ಅಹಮದ್ ನಗರದ ಹೊರನಾಡು ಕನ್ನಡಿಗರ ಸಂಘದಲ್ಲೂ ಕೆ.ಕೆ. ಶೆಟ್ಟಿ
    ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಇದೇ ಸಂಘಟನೆಗಳ ಮೂಲಕ ಹಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ
    ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
    ವೈಯಕ್ತಿಕ ಜೀವನದಲ್ಲವರು ಶುದ್ಧ ಚಾರಿತ್ರ್ಯ ಉಳಿಸಿಕೊಂಡಿದ್ದಾರೆ, ಉಳಿದವರಿಗೆ ರೋಲ್ ಮಾಡೆಲ್ ಆಗುವ
    ಅರ್ಹತೆ ಪಡೆದಿದ್ದಾರೆ. ಹಾಗಾಗಿಯೇ ಅವರ ತಾಕತ್ತು, ವರ್ಚಸ್ಸು ಬೆಳೆಯುತ್ತಾ ಹೋಗಿದೆ. ಉಳಿದವರಿಗೆ ಅಸಾಧ್ಯ
    ಅನ್ನುವಂತಹ ಅದ್ಭುತ ಸಾಧನೆಗೆ ಅವರನ್ನು ತಯಾರು ಮಾಡಿದೆ. ಸ್ವಂತ ಮನೆ, ತೋಟ, ಉದ್ಯಮ, ಸಂತೃಪ್ತ
    ಕುಟುಂಬ, ಕಷ್ಟ -ಸುಖಕ್ಕೆ ಆಗುವ ಬಂಧುಗಳು, ಸ್ನೇಹಿತರು ಹೀಗೆ ಕಂಫರ್ಟ್ ಝೋನ್‌ನಲ್ಲಿ ಅವರಿದ್ದಾರೆ. ಕೆ.ಕೆ.
    ಶೆಟ್ಟಿಯವರಿಗೆ ತುಂಬಾ ಪಾಸಿಟಿವ್ ಆದ ಮತ್ತು ಬಲಿಷ್ಠವಾದ ಗೆಳೆಯರ ಬಳಗವಿದೆ.
    ಈ ಸಮಾಜದಲ್ಲಿ ಹಲವರು ಪ್ರಸಿದ್ಧಿಗಾಗಿಯೇ ಬದುಕುತ್ತಾರೆ. ಕೆಲವೇ ಕೆಲವರು ಮಾತ್ರ ಬದುಕುವ ರೀತಿಯಿಂದ
    ಪ್ರಸಿದ್ಧರಾಗುತ್ತಾರೆ. ಇದರಲ್ಲಿ ಎರಡನೆಯ ವರ್ಗಕ್ಕೆ ಸೇರಿದವರು ಉದ್ಯಮಿ ಕೆ.ಕೆ. ಶೆಟ್ಟಿ

    ಬದುಕಿನ ಏಣಿಯೇ ವಿಚಿತ್ರ! ಹತ್ತಲಿಕ್ಕೆ ಸಾವಿರ ಮೆಟ್ಟಲುಗಳು, ಬೀಳಲಿಕ್ಕೆ ಒಂದೇ ಒಂದು Slip ಸಾಕು.
    We loose everything. ಇಂತಹದ್ದೊಂದು ಎಚ್ಚರಿಕೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡು ಶ್ರದ್ಧೆ,
    ಸಹನೆ, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡು ಬೆಳೆದು ನಿಂತ ಸಾಹಸಿ ಉದ್ಯಮಿಗಳ ಪೈಕಿ ಕೆ.ಕೆ.
    ಶೆಟ್ಟಿಯವರದ್ದು ಮೊದಲ ಸಾಲಿನ ಹೆಸರು. ಮುಂಬೈ, ಪುಣೆ, ಅಹಮ್ಮದ್ ನಗರ, ಕಾಸರಗೋಡು,
    ಕುಂಬಳೆಗಳಲ್ಲಿ ಅವರಿಗೆ ದೊಡ್ಡ ಹೆಸರಿದೆ. ಅಲ್ಲೆಲ್ಲ ಸಾರ್ವಜನಿಕ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಅಲ್ಲೆಲ್ಲ
    ಅವರು ಸಾವಿರಾರು ಜನಕ್ಕೆ ಬೇಕಾದ ವ್ಯಕ್ತಿ. ನೂರಾರು ಜನರ ಕಷ್ಟಕಾಲದಲ್ಲಿ ನೆನಪಾಗುವ ದೇವತಾ ಮನುಷ್ಯ.
    ದುಡ್ಡು ಬಂದಾಗ ದೇಶ ಕಾಣುವುದಿಲ್ಲ ಅನ್ನುವವರಿದ್ದಾರೆ. ಆದರೆ ಕೆ.ಕೆ. ಶೆಟ್ಟಿಯವರನ್ನು ದುಡ್ಡು ಯಾವತ್ತೂ
    ಬದಲಾಯಿಸಲಿಲ್ಲ. ದುಡ್ಡಿಗಾಗಿ ಅವರೂ ಬದಲಾಗಲಿಲ್ಲ. ಹಣಕಾಸಿನ ವಿಷಯದಲ್ಲಿ ಇವತ್ತಿಗೂ ಡಿಸಿಪ್ಲಿನ್ ತಪ್ಪಿಲ್ಲ.
    ದುಡಿದ ದುಡ್ಡು ಅವರಿಗೆ ಕೆಲವು ಕಂಫರ್ಟ್‌ಗಳನ್ನು ಕೊಟ್ಟಿರಬಹುದು. ಆಸ್ತಿ, ಒಡವೆ, ಹೆಸರು, ಆರೋಗ್ಯ,
    ಒಳ್ಳೆಯ ಹೆಂಡತಿ, ಚಂದದ ಮಕ್ಕಳು, ನೆಮ್ಮದಿಯ ಸಂಸಾರ, ಸಾಮಾಜಿಕ ಸ್ಥಾನಮಾನ ಎಲ್ಲಾ ಇದ್ದು
    ಇವತ್ತಿಗೂ ಅಹಂಕಾರಿಯಾಗಿಲ್ಲ.
    ದೈವ -ದೇವರುಗಳ ಬಗ್ಗೆ ಕೆ.ಕೆ. ಶೆಟ್ಟಿಯವರಿಗೆ ಅಪಾರವಾದ ನಂಬಿಕೆ. ಸ್ವಂತ ಮನೆ ಕಟ್ಟುವ ಮೊದಲೇ ೩೧
    ವರ್ಷಗಳ ಹಿಂದೆ ಅಹಮದ್ ನಗರದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೃಹತ್ ಅಯ್ಯಪ್ಪ ದೇವಸ್ಥಾನವನ್ನು
    ನಿರ್ಮಿಸಿದ್ದಾರೆ. ಕಾಸರಗೋಡಿನ ಕುಂಬಳೆಯ ಮುಂಡಪ್ಪಳ್ಳ ಎಂಬಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ ಏಳು ಕೋಟಿ
    ವೆಚ್ಚದಲ್ಲಿ ರಾಜರಾಜೇಶ್ವರಿ ದೇವಸ್ಥಾನವನ್ನು ಕಟ್ಟಿದ್ದಾರೆ, ಎರಡೂ ದೇವಸ್ಥಾನಗಳ ನಿರ್ಮಾಣಕ್ಕೆ ತಾನು ಕಷ್ಟಪಟ್ಟು
    ದುಡಿದ ಹಣವನ್ನೇ ವಿನಿಯೋಗಿಸಿದ್ದಾರೆ. ಯಾರಿಂದಲೂ ಡೊನೇಷನ್ ಪಡೆದವರಲ್ಲ. ಇದೀಗ ಕುಂಬಳೆಯ
    ಗೋಪಾಲಕೃಷ್ಣ ದೇವಸ್ಥಾನಕ್ಕೆ ೭೫ ಲಕ್ಷ ರೂ.ಗಳ ವೆಚ್ಚದ ದ್ವಾರ ನಿರ್ಮಾಣ, ಮದೂರು ಮಹಾಗಣಪತಿ
    ದೇವಸ್ಥಾನಕ್ಕೆ ೨೫ ಲಕ್ಷ ರೂ. ವೆಚ್ಚದಲ್ಲಿ ಗ್ರಾನೈಟ್ ಒದಗಿಸಿಕೊಟ್ಟಿದ್ದಾರೆ.
    ಬಂಟ್ವಾಳ ಸಮೀಪದ ಹಳೆಗೇಟ್ ಎಂಬಲ್ಲಿ ಇಪ್ಪತ್ತೈದು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಕೆ.ಕೆ. ಶೆಟ್ಟರು
    ನಡೆಸಿಕೊಂಡು ಬರುತ್ತಿದ್ದಾರೆ.ಪ್ರತಿಷ್ಠಿತ ಪುಣೆ ಬಂಟರ ಸಂಘದಲ್ಲೂ ಕೆ.ಕೆ. ಶೆಟ್ಟಿ ಸಕ್ರಿಯರಾಗಿದ್ದಾರೆ. ತನ್ಮೂಲಕ
    ಹಲವು ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಿದ್ದಾರೆ.
    ಅಹಂಕಾರ ಎಂಬುದು ಗೆಲುವಿನ ಮೊದಲ ಶತ್ರು ಎಂಬುದನ್ನು ಕೆ.ಕೆ. ಶೆಟ್ಟಿಯವರು ತಿಳಿದುಕೊಂಡು
    ದಶಕಗಳೇ ಕಳೆದಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇವತ್ತಿಗೂ ದುಡಿಯುತ್ತಿದ್ದಾರೆ. ಬದುಕಿನ ಪ್ರತಿ ಹಂತದಲ್ಲೂ
    ತನ್ನ ಜೀವನವೆಂಬ ಕುದುರೆ ಸರಿಯಾದ ದಿಕ್ಕಿಗೆ ಓಡುತ್ತಿದೆಯಾ ಎಂಬುದನ್ನು ನೋಡಿಕೊಳ್ಳುತ್ತಿದ್ದಾರೆ.
    ತನ್ನ ಸಮಯ ಎಲ್ಲಿ ಮತ್ತು ಹೇಗೆ ವ್ಯರ್ಥವಾಗಿ ಸೋರಿ ಹೋಗುತ್ತಿದೆ ಎಂಬುದನ್ನು ಗಮನಿಸುತ್ತಲೇ ಇರುತ್ತಾರೆ.
    ಸಮಯವೊಂದನ್ನು ಉಳಿಸಿಕೊಂಡರೆ ದುಡ್ಡು, ಆರೋಗ್ಯ, ನೆಮ್ಮದಿ ಮೂರನ್ನೂ ಉಳಿಸಿಕೊಂಡ ಹಾಗೆ ಎಂದು
    ನಂಬಿದ್ದಾರೆ.
    ಅತ್ಯುನ್ನತ ಸಾಧನೆ, ದುಡ್ಡು, ಹೆಸರು ಮಾಡಿರುವ ಅವರು ಆರ್ಥಿಕವಾಗಿ ಹಿಂದುಳಿದ ಹಲವರ ಬದುಕು
    ರೂಪಿಸಿದ್ದಾರೆ.
    ಪ್ರಪಂಚದಲ್ಲಿ ಎರಡು ತರಹದ ಜನರಿದ್ದಾರೆ.ಕೊಡುವವರು ಮತ್ತು ಪಡೆಯುವವರು. ಪಡೆಯುವವರು
    ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೊಡುವವರು ಆತ್ಮತೃಪ್ತಿಯಿಂದ ಇರುತ್ತಾರೆ. ಕೆ.ಕೆ. ಶೆಟ್ಟಿ ಕೊಡುವವರ
    ಗುಂಪಿಗೆ ಸೇರಿದವರು. ನೆರವು, ಸಹಾಯ ನೀಡುತ್ತಾ ಆತ್ಮವಿಶ್ವಾಸ, ಆತ್ಮ ಗೌರವ ಹೆಚ್ಚಿಸಿಕೊಂಡವರು. ಹಾಗೆ
    ಬೆಳೆದು ನಿಂತ ಆತ್ಮ ಗೌರವವೇ ಅವರನ್ನಿಂದು ನಿರಂತರ ಗೆಲುವಿನತ್ತ ಕರೆದೊಯುತ್ತಿದೆ. ಲಕ್ಕು, ಇನ್ಫ್ಲೂಯೆನ್ಸ್,
    ಗಾಡ್ ಫಾದರ್, ಭವಿಷ್ಯ, ವಾಸ್ತು ಅಂತ ಏನೇ ಮಾತನಾಡಿದರೂ ಅಂತಿಮವಾಗಿ ಗೆಲುವಿನತ್ತ ನಮ್ಮನ್ನು
    ಕೈ ಹಿಡಿದು ನಡೆಸುವುದು ನಮ್ಮ ಶ್ರದ್ಧೆ, ತಾಕತ್ತು ಮತ್ತು ನೀ ಯತ್ತು ಎಂಬುದಕ್ಕೆ ಸಾಕ್ಷಿಯಾಗಿರುವವರು ನಮ್ಮ
    ನಿಮ್ಮ ಮತ್ತು ಈ ಸಮಾಜದ ನಡುವೆ ಬೆಳೆದು ನಿಂತಿರುವ ಕೆ.ಕೆ. ಶೆಟ್ಟಿ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss