ಕಲಬುರಗಿ: ಅಕ್ರಮ ಮರಳು ಸಾಗಾಟ ತಡೆಯಲು ಹೋದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತಪಟ್ಟ ಸಿಬ್ಬಂದಿ ನೆಲೋಗಿ ಠಾಣೆಯಲ್ಲಿ ನಿಯೋಜಿತರಾಗಿದ್ದರು. 51 ವರ್ಷದ ಎಂ. ಚೌವ್ಹಾಣ್ ಕೊಲೆಯಾದ ಹೆಡ್ ಕಾನ್ಸ್‌ಟೇಬಲ್. ಜೇವರ್ಗಿಯ ನಾರಾಯಣಪುರದ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಅಕ್ರಮ ಮರಳು ಸಾಗಾಟದ ಮಾಹಿತಿ ಪಡೆದ ಎಂ. ಚೌವ್ಹಾಣ್ ಸ್ಥಳ ಪರಿಶೀಲನೆಗೆ ಹೋಗಿದ್ದಾರೆ. ಬೈಕ್‌ನಲ್ಲಿ ಹೋಗುತ್ತಿದ್ದ ಎಂ. ಚೌವ್ಹಾಣ್ ಮೇಲೆ ಟ್ರಾಕ್ಟರ್ ಹತ್ತಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ ಮುಖ್ಯ ಪೇದೆ ಎಂ. ಚೌವ್ಹಾಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎಂ. ಚೌವ್ಹಾಣ್ ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿಯಾಗಿದ್ದಾರೆ. ಕಲಬುರಗಿ ಎಸ್ಪಿ ಇಶಾ ಪಂತ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಜೂನ್ 15 ರಂದು ಕಲಬುರಗಿಯ ಜೇವರ್ಗಿ ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ ಕಾನ್ ಸ್ಟೇಬಲ್ ಮಯೂರ ಚೌಹಾಣ್ ಮೇಲೆ ಟ್ರ್ಯಾಕ್ಟರ್ ಹರಿಸಿದ ಪ್ರಮುಖ ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಚೌಹಾಣ್ ಅವರನ್ನು ಕೊಂದವರ ವಿರುದ್ಧ ಐಪಿಸಿ ಸೆಕ್ಷನ್ 302, 333, 307, 379, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಘಟನೆ ಕುರಿತು ಟ್ವೀಟ್ ಮಾಡಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮರಳು ದಂಧೆ ತಡೆಯಲು ಹೋದ ಪೊಲೀಸ್ ಪೇದೆ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ “ಮಾಫಿಯಾ”ಗಳು ತಲೆಯೆತ್ತುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಸಮಾಜವನ್ನು ಕಾಯುವ ಪೊಲೀಸರಿಗೆ ಈ ಸ್ಥಿತಿ ಬಂದರೆ ಜನಸಾಮಾನ್ಯರನ್ನು ಕಾಪಾಡುವವರು ಯಾರು?’ ಎಂದು ಪ್ರಶ್ನಿಸಿದ್ದಾರೆ.
©2021 Tulunada Surya | Developed by CuriousLabs