ಮಂಡ್ಯ :ಪತಿಯನ್ನು ತಾನೇ ಕೊಂದು ಪತ್ನಿಯು ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಕತೆ ಕಟ್ಟಿದ್ದು ತನಿಖೆಯ ಸಂದರ್ಭದಲ್ಲಿ ಈಕೆಯ ಕಳ್ಳಾಟ ಬೆಳಕಿಗೆ ಬಂದಿದೆ.
ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಪತ್ನಿಯು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ. ಮೃತ ಪತಿಯನ್ನು 33 ವರ್ಷದ ಶಿವಕುಮಾರ್ ಎಂದು ಗುರುತಿಸಲಾಗಿದೆ. ಗಂಡನಿಗೆ ಕಂಠಪೂರ್ತಿ ಕುಡಿಸಿದ್ದ ಪತ್ನಿಯು ಮಧ್ಯರಾತ್ರಿ ಸಮಯದಲ್ಲಿ ತನ್ನ ಪ್ರಿಯಕರನನ್ನು ಕರೆಯಿಸಿ ಶಿಚಕುಮಾರ್ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಬಳಿಕ ಕುತ್ತಿಗೆ ಬಿಗಿದು ಹತ್ಯೆಗೈಯಲಾಗಿದೆ. ತಾನೇ ಪತಿಯನ್ನು ಕೊಂದಿದ್ದರೂ ಸಹ ಮಾರನೇ ತನಗೇನು ಗೊತ್ತೇ ಇಲ್ಲ ಎಂಬಂತೆ ಪತ್ನಿ ನಾಗಮ್ಮ ಕತೆ ಕಟ್ಟಿದ್ದಳು. ಕುಡಿದು ನನ್ನ ಬಳಿ ಜಗಳ ತೆಗೆದಿದ್ದ ಪತಿಯು ನನ್ನ ಹಾಗೂ ಮಗುವಿನ ಕೈ ಕಾಲು ಕಟ್ಟಿ ರೂಮಿನಲ್ಲಿ ಕೂಡಿ ಹಾಕಿದ್ದ. ಬೆಳಗ್ಗೆ ನಮ್ಮ ತಾಯಿ ಬಂದು ಬಾಗಿಲು ತೆಗೆದು ನೋಡಿದರೆ ಈತನನ್ನು ಯಾರೋ ಕೊಲೆ ಮಾಡಿದ್ದರು ಎಂದು ನಾಗಮ್ಮ ಸುಳ್ಳು ಹೇಳಿದ್ದಳು.
ಆದರೆ ಸೊಸೆಯ ಮೇಲೆ ಅನುಮಾನ ಹೊಂದಿದ್ದ ಮೃತ ಶಿವಕುಮಾರ್ ತಾಯಿ ಜಯಮ್ಮ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನ್ನ ಪುತ್ರನನ್ನು ಸೊಸೆ ವೈರ್ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ದೂರು ನೀಡಿದ್ದರು. ಅತ್ತೆ ಜಯಮ್ಮ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.
ಕಳೆದ 13 ವರ್ಷಗಳ ಹಿಂದೆ ಶಿವಕುಮಾರ್ ಜೊತೆಯಲ್ಲಿ ನಾಗಮ್ಮ ಪ್ರೀತಿಸಿ ಮದುವೆಯಾಗಿದ್ದರು. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ನಾಗಮ್ಮಗೆ ಕನಕಪುರ ಮೂಲದ ಹೇಮಂತ್ ಪರಿಚಯವಾಗಿತ್ತು. ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಶಿವಕುಮಾರ್ಗೆ ತಿಳಿದು ನಾಗಮ್ಮ ಜೊತೆಯಲ್ಲಿ ನಿತ್ಯ ಜಗಳ ಮಾಡಿದ್ದ. ಎರಡು ತಿಂಗಳ ಹಿಂದೆ ಶಿವಕುಮಾರ್ ನಾಗಮ್ಮಳನ್ನು ಗಾರ್ಮೆಂಟ್ಸ್ ಕೆಲಸದಿಂದ ಬಿಡಿಸಿದ್ದ. ಅಲ್ಲದೇ ನಾಗಮ್ಮಳ ಮೊಬೈಲ್ ಫೋನ್ನ್ನೂ ಕಿತ್ತುಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ನಾಗಮ್ಮ ತನ್ನ ಪ್ರಿಯಕರ ಹೇಮಂತ್ ಜೊತೆ ಸೇರಿ ಶಿವಕುಮಾರ್ ಕೊಲೆಗೆ ಪ್ಲಾನ್ ರೂಪಿಸಿ ಈ ಕೃತ್ಯ ಎಸಗಿದ್ದಳು ಎನ್ನಲಾಗಿದೆ.
